ಮುದಗಲ್ಲ ವರದಿ…
ಮಣ್ಣೆತ್ತಿನ ಅಮಾವಾಸ್ಯೆಗೆ ಪಿಒಪಿ ಎತ್ತುಗಳ ಪೂಜೆ!..
ಮುದಗಲ್ಲ :- ಹೆಸರೇ ಹೇಳುವಂತೆ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಸಂಭ್ರಮಿಸುವುದು ಸಂಪ್ರದಾಯ, ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಪಿಒಪಿಯಿಂದ ತಯಾರಿಸಿದ ಆಕರ್ಷಕವಾದ ಬಣ್ಣ ಬಣ್ಣದ ಎತ್ತುಗಳ ಬೇಡಿಕೆ ಹೆಚ್ಚಿದೆ.
ಸಂಪ್ರದಾಯಬದ್ಧವಾಗಿ ಅವುಗಳಿಗೆ ಪೂಜೆ ನಡೆಯುತ್ತಿದೆ.
ಪಿಒಪಿ ಪರಿಸರಕ್ಕೆ ಮಾರಕವಾಗಿದ್ದರೂ ಜನರು ಜಾಗೃತರಾಗದೇ ಅದರ ಅಂದ, ಆಕರ್ಷಣೆಗೆ ಮಾರು ಹೋಗುತ್ತಿದ್ದು, ತಲೆತಲಾಂತರದಿಂದ ಮೂರ್ತಿ ತಯಾರಿಸಿಕೊಂಡು ಬಂದಿದ್ದ ಕುಟುಂಬಗಳಿಗೆ ಇದೀಗ ಗಾಯದ ಮೇಲೆ ಬರೆ ಬಿದ್ದಿದೆ. ಈ ಮೂಲಕ ತಮ್ಮ ವೃತ್ತಿ ಬಿಡುವ ಪರಿಸ್ಥಿತಿ ಎದುರಾಗಿದೆ. ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನ ಎತ್ತುಗಳನ್ನು ಪೂಜಿಸಲು ರೈತರು ಸಜ್ಜಾಗಿದ್ದು ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗದಲ್ಲಿ,. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಹಿಂದೆ ರಸ್ತೆ ಬಳಿ ಪಿಒಪಿ ಮತ್ತು ಮಣ್ಣಿನಲ್ಲಿ ತಯಾರಿಸಿದ ಎತ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ.
ಮಳೆ, ಬೆಳೆ ಸಮೃದ್ಧಿಯಾಗಲಿ, ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ನಿರ್ಮಿಸಿದ ಎತ್ತುಗಳನ್ನು ಪೂಜಿಸಲಾಗುತ್ತದೆ. ಆದರೆ, ಕಾಲ ಬದಲಾದಂತೆ ಮಣ್ಣೆತ್ತಿನ ಬದಲಾಗಿ ಪಿಒಪಿ ಎತ್ತುಗಳು ಬಹುತೇಕವಾಗಿ ಮಾರುಕಟ್ಟೆಗೆ ಬಂದಿವೆ.
ಮಹಾರಾಷ್ಟ್ರವೇ ಮೂಲ:
ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮಹಾರಾಷ್ಟ್ರದ ಸೋಲ್ಲಾಪುರದಿಂದಲೇ ಇದೀಗ ಪಿಒಪಿ ಎತ್ತುಗಳ ಮೂರ್ತಿ ಮಾರುಕಟ್ಟೆ ಪ್ರವೇಶಿಸಿವೆ. ವಿವಿಧ ಬಣ್ಣಗಳಿಂದ ಪಿಒಪಿ ಎತ್ತು ಸಿಂಗರಿಸಿದ್ದು ಆಕರ್ಷಕವಾಗಿ ಕಾಣುತ್ತಿವೆ. ಹೀಗಾಗಿ ಗ್ರಾಹಕರು ಮಣ್ಣೆತ್ತಿನ ಮೂರ್ತಿ ಖರೀದಿಸದೆ ಇವುಗಳತ್ತ ಹೆಚ್ಚಿನ ಆಸ್ಥೆ ವಹಿಸಿದ್ದಾರೆ. ಮಣ್ಣೆತ್ತಿಗೆ ₹ 50ರಿಂದ ₹ 150ರ ವರೆಗೆ ದರವಿದ್ದರೆ, ಪಿಒಪಿ ಎತ್ತಿನ ಮೂರ್ತಿಗೆ ₹100ರಿಂದ ₹ 200ರ ವರೆಗೆ ದರವಿದೆ. ಆದರೂ ಸಹ ಗ್ರಾಹಕರು ಇವುಗಳನ್ನೇ ಖರೀದಿಸುತ್ತಿದ್ದಾರೆ.
ಮೂರ್ತಿ ತಯಾರಿಕರಿಗೆ ಹೊಡೆತ:
ತಮ್ಮ ಪೂರ್ವಜರಿಂದ , ಮಣ್ಣೆತ್ತು ಸೇರಿದಂತೆ ವಿವಿಧ ಮೂರ್ತಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇದೀಗ ಪಿಒಪಿ ಹಾವಳಿಯಿಂದ ಆರ್ಥಿಕ ನಷ್ಟಕ್ಕೆ ಸಿಲುಕಿವೆ. ಇದೀಗ ಈ ವೃತ್ತಿಯನ್ನೇ ಬಿಟ್ಟು ಅನ್ಯ ವೃತ್ತಿಯತ್ತ ಮುಖಮಾಡಿದ್ದೇವೆ. ಅಧಿಕಾರಿಗಳು ಕೇವಲ ಗಣೇಶ ಹಬ್ಬದ ಸಂದರ್ಭದಲ್ಲಿ ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಿದರೆ ಸಾಲದು, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಎತ್ತಿನ ಮೂರ್ತಿಗಳಿಗೆ ಕಡಿವಾಣ ಹಾಕಬೇಕೆಂದು ಮೂರ್ತಿ ತಯಾರಕರು ಒತ್ತಾಯಿಸಿದ್ದಾರೆ.
ಐವತ್ತು ವರ್ಷಗಳಿಂದ ನಮ್ಮ ಮನೆಯಲ್ಲಿ ಮಣ್ಣೆತ್ತು ತಯಾರಿಸುತ್ತಿದ್ದೇವೆ. ಆದರೆ ಪಿಒಪಿ ಎತ್ತುಗಳು ಮಾರಾಟಕ್ಕೆ ಬಂದ ಹಿನ್ನೆಲೆಯಲ್ಲಿ ನಮ್ಮ ಮಣ್ಣೆತ್ತುಗಳಿಗೆ ಬೇಡಿಕೆ ಕುಸಿತವಾಗಿದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಬಸವರಾಜ ಕುಂಬಾರ , ,ಮಣ್ಣೆತ್ತು ತಯಾರಕರು.
ರೈತರ ಕುಟುಂಬಗಳು ಬಣ್ಣ ಬಣ್ಣ ಮೂತಿ೯ಗಳನ್ನು ಹೆಚ್ಚಾಗಿ ಖರೀಸುತ್ತಿದ್ದು ಮಣ್ಣಿನ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಅಮರಪ್ಪ ಕುಂಬಾರ
ವರದಿ:- ಮಂಜುನಾಥ ಕುಂಬಾರ