LOCAL NEWS : ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳುವಳಿ ಆರಂಭಿಸಿದ ನರೇಗಾ ನೌಕರರು..!!
ಕನಕಗಿರಿ : 6 ತಿಂಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾಮಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೆಲಸ ಸ್ಥಗಿತಗೊಳಿಸಿ ತಾ.ಪಂ ಕಚೇರಿ ಮುಂದೆ ಬುಧವಾರದಿಂದ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದರು.
ಈ ವೇಳೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ವಿಜಯ್ ಶಿರಿಗೇರಿ ಅವರು ಮಾತನಾಡಿ, ಕಳೆದ 15 ವರ್ಷಗಳಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ 5,000 ಕ್ಕಿಂತ ಹೆಚ್ಚು ನೌಕರರು ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೌಕರರಿಗೆ ಸೇವಾ ಭದ್ರತೆ ಇಲ್ಲ. ಆರೋಗ್ಯ ವಿಮೆ ಸೌಲಭ್ಯ ಇಲ್ಲ. ಜೊತೆಗೆ ಆರು ತಿಂಗಳಿಂದ ವೇತನವು ಪಾವತಿ ಆಗಿರುವುದಿಲ್ಲ. ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಇದರಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ಆರಂಭಿಸಲಾಗಿದೆ ಎಂದರು.
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಮೇಘರಾಜ್, ಸಯ್ಯದ್ ತನ್ವೀರ್, ಕಿಶೋರ್, ಚನ್ನಬಸವ, ಮಹೇಶ್ ರೆಡ್ಡಿ, ರಿಯಾಜ್, ಮೌನೇಶ್, ಮಂಜುನಾಥ, ನಾಗಪ್ಪ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.