LOCAL NEWS : ಸಿಎಂ ಕೊಪ್ಪಳ ಮತದಾರರ ಕ್ಷಮೆ ಯಾಚಿಸಲಿ : ಸಿ ವಿ ಚಂದ್ರಶೇಖರ ಆಗ್ರಹ!
ಕೊಪ್ಪಳ : 1991ರ ಲೋಕಸಭಾ ಚುನಾವಣೆಯಲ್ಲಿ ಮೋಸದಿಂದ ತಮ್ಮನ್ನು ಸೋಲಿಸಿದರು ಎಂಬ ಹೇಳಿಕೆ ನೀಡಿ ಕೊಪ್ಪಳದ ಮತದಾರರಿಗೆ ಅವಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಕೊಪ್ಪಳ ಜನತೆಯ ಕುರಿತು ಬೇಷರತ್ ಕ್ಷಮೆ ಯಾಚಿಸಬೇಕೆಂದು ಜೆಡಿಎಸ್ ಪಕ್ಷದ ಪ್ರಮುಖರಾದ ಸಿ ವಿ ಚಂದ್ರಶೇಖರ ಒತ್ತಾಯಿಸಿದೆ.
ನಗರದಲ್ಲಿ ವರದಿಗಾರರೊಂದಿಗೆ ಸಿ ವಿ ಚಂದ್ರಶೇಖರ್ ಮಾತನಾಡುತ್ತಾ “ಮುಖ್ಯಮಂತ್ರಿ ಅವರಿಗೆ ಸಾಮಾನ್ಯ ಜ್ಞಾನವೂ ಕೈಕೊಟ್ಟಂತಿದೆ. ಅಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ತಾವು ಸ್ಪರ್ಧಿಸಿದ್ದರು ಎಂಬುದನೇ ಅವರು ಮರೆತಂತಿದೆ. ಅಂದು ಅಕ್ರಮ ಹಾಗೂ ವಾಮಮಾರ್ಗದಿಂದ ಕಾಂಗ್ರೆಸ್ ಪಕ್ಷ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿತ್ತು ಎಂಬುದನ್ನು ಮುಖ್ಯಮಂತ್ರಿ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬೇಜವಾಬ್ದಾರಿ ಹೇಳಿಕೆ ನೀಡಿ ಕೊಪ್ಪಳದ ಮತದಾರರಿಗೆ ಅಗೌರವ ತೋರಿರುವ ಸಿದ್ದರಾಮಯ್ಯನವರು ಕ್ಷಮೆ ಯಾಚಿಸಲೇಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರೆಡ್ಡಿ, ರಾಜ್ಯ ಕಾರ್ಯಾಧ್ಯಕ್ಷರಾದ ರಾಜು ನಾಯಕ, ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ ಹಾಗೂ ಪಕ್ಷದ ಜಿಲ್ಲಾ ವಕ್ತಾರರಾದ ಮಲ್ಲನಗೌಡ ಕೋನನಗೌಡ್ರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಯನ್ನು ಗಮನಿಸಿದರೆ ಮೇ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಅಕ್ರಮವಾಗಿ ಜಯಗಳಿಸಿದಂತಿದೆ. ತವರಿನಲ್ಲಿ ಸೋಲುವ ಭಯದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುವರಿಯಾಗಿ ಸ್ಪರ್ಧಿಸುವುದು, ಜಯದ ನಂತರ ರಾಜೀನಾಮೆ ಕೊಡುವುದು, ಆನಂತರ ಅಲ್ಲಿನ ಮತದಾರರಿಗೆ ಅವಮಾನ ಮಾಡುವುದು ಸಿದ್ದರಾಮಯ್ಯನವರಿಗೆ ಸಿದ್ದಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಎರಡನೇ ಸಲ ಮುಖ್ಯಮಂತ್ರಿಯಾಗಿ, ಆ ಪಕ್ಷದ ವಿರುದ್ಧವೇ ಆರೋಪ ಮಾಡಿ ಈಗ ಆ ಪಕ್ಷ ಜನರ ದಾರಿ ತಪ್ಪಿಸಲು ಬಿಹಾರದಲ್ಲಿ ಹಮ್ಮಿಕೊಂಡಿರುವ ‘ವೋಟ್ ಚೋರಿ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿರುವುದು ನೈತಿಕವಾಗಿ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ವಿರುದ್ಧ ಮಾತನಾಡಿದ ವಾಲ್ಮೀಕಿ ಸಮಾಜದ ಕೆ ರಾಜಣ್ಣ ಅವರನ್ನು ಅವಮಾನಕಾರಿಯಾಗಿ ಮಂತ್ರಿ ಸ್ಥಾನದಿಂದ ವಜಾ ಗೊಳಿಸಿದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈಗ ಸಿದ್ದರಾಮಯ್ಯನವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಪ್ರದರ್ಶಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ರಾಜಶೇಖರ ಹಿಟ್ನಾಳ ಅವರಿಗೆ ಒಂದು ನ್ಯಾಯ ಸಿದ್ದರಾಮಯ್ಯನವರಿಗೆ ಒಂದು ನ್ಯಾಯ ಎಂಬುದು ಕಾಂಗ್ರೆಸ್ ನೀತಿಯೇ ಎಂದು ಕುಟುಕ್ಕಿದ್ದಾರೆ.