ಪ್ರಜಾ ವೀಕ್ಷಣೆ ವಿಶೇಷ :
SPECIAL STORY : ಬಂಜಾರ ಸಮಾಜದ ಯುವ ನಾಯಕ ಸುರೇಶ ಬಳೂಟಗಿಗೆ “ಗೌರವ ಡಾಕ್ಟರೇಟ್” ಪುರಸ್ಕಾರ..!

ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕಕ್ಕಿಹಳ್ಳಿ ತಾಂಡದ ಬಂಜಾರ ಸಮಾಜ ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ಇವರ ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ ಇವರು “ಗೌರವ ಡಾಕ್ಟರೇಟ್” ಪ್ರತಿಷ್ಠಿತ ಗೌರವ ಪದವಿ ನೀಡಿ ಗೌರವಿಸಲಿಸಲಿದ್ದಾರೆ.

ಇದೇ ಸೆಪ್ಟಂಬರ್ 27 ರಂದು ನಡೆಯುವ ಸಮಾರಂಭದಲ್ಲಿ ಸುರೇಶ ಅವರು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಗಳು ಹಾಗೂ ಅವರ ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಸನ್ ರೈಸ್ ಇಂಟರ್ನ್ಯಾಷನಲ್ ಅಕಾಡೆಮಿ ಬೆಂಗಳೂರು ಇವರು ಯುವ ನಾಯಕ ಸುರೇಶ ಬಳೂಟಗಿ ಅವರಿಗೆ ಗೌರವ ಪೂರಕವಾದ ಆಹ್ವಾನ ನೀಡಿದ್ದಾರೆ.
ಬಹುಮೂಖಿ ಸುರೇಶ ಬಳೂಟಗಿ

ಸುರೇಶ ಬಳೂಟಗಿ ಅವರು ಶಿಕ್ಷಣ, ಆರೋಗ್ಯ, ಮತ್ತು ಆರ್ಥಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಇನ್ನೂ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಿಕೊಂಡು ಈ ಭಾಗದ ಲಂಬಾಣಿಗರ ಸಂಸ್ಕೃತಿ ಸಂಪ್ರದಾಯಗಳು, ನೃತ್ಯಗಳು, ಹಾಡುಗಳು ಮತ್ತು ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಬಹು ಮುಖ್ಯಪಾತ್ರವಹಿಸಿದ್ದಾರೆ.
ಕುಗ್ರಾಮದಲ್ಲಿ ಅರಳಿದ ಯುವ ಚೇತನ ಸುರೇಶ ಬಳೂಟಗಿ

ಕಕ್ಕಿಹಳ್ಳಿ ತಾಂಡಾದ ಶ್ರೀ ರಾಮಪ್ಪ ಬಳೂಟಗಿ ಹಾಗೂ ಶ್ರೀಮತಿ ದೇವಮ್ಮ ಬಳೂಟಗಿ ಇವರ ಐದು ಮಕ್ಕಳಲ್ಲಿ ಇವರು ನಾಲ್ಕನೆಯವರು.1982ರ ಮೇ ತಿಂಗಳ 22 ರಂದು ಜನಿಸಿದ ಇವರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು, ತಬ್ಬಲಿಯಾಗಿದ್ದೂರು. ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಮತೆಯಿಂದ ತಮ್ಮ ಅಜ್ಜಿ ಶ್ರೀಮತಿ ಭದ್ರಮ್ಮ ಲೋಕಾನಾಯಕ, ದೊಡ್ಡಮ್ಮ ಶ್ರೀಮತಿ ದಾನಮ್ಮ ಸೂಳಿಕೇರಿ ಅವರ ಆಶ್ರಯದಲ್ಲಿ ಹಾಗೂ ಅವರ ಸೋದರ ಮಾವ ಗೋಪಾಲ ನಾಯಕ, ಪತ್ನಿ ಶ್ರೀಮತಿ ರೇಣುಕಾ ನಾಯಕ ಅವರ ನೆರಳಿನಲ್ಲಿ ಬೆಳೆದಿದ್ದಾರೆ.
ವಿದ್ಯಾವಂತ ಸುರೇಶ ಬಳೂಟಗಿ
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಕ್ಕಿಹಳ್ಳಿಯ ಸರಕಾರಿ ಶಾಲೆಯಲ್ಲಿ, ಪ್ರೌಢ ಮತ್ತು ಕಾಲೇಜ್ ಶಿಕ್ಷಣವನ್ನು ಕುಕನೂರಿನ ಪ್ರತಿಷ್ಠಿತ ವಿದ್ಯಾನಂದ ಗುರುಕುಲ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ಬಿ. ಎ.ಪದವಿಯನ್ನು ಗದಗಿನ ಪಂಡಿತ ಪಂಚಾಕ್ಷರಿ ಗವಾಯಿಗಳವರ ಸಂಸ್ಥೆಯಲ್ಲಿ ಪೂರೈಸಿದ್ದಾರೆ.
ವರದಕ್ಷಣೆ ಇಲ್ಲದೆ ಮದುವೆಯಾದ ಸುರೇಶ ಬಳೂಟಗಿ ; ಇಂದಿನ ಸಮಾಜಕ್ಕೆ ಸ್ಪೂರ್ತಿ ಆದರ್ಶಪ್ರಾಯ ಜೀವನ :

ನಂತರ 2011ರ ನವೆಂಬರ ತಿಂಗಳಲ್ಲಿ ಬಳೂಟಗಿ ಗ್ರಾಮದ ಅನ್ನಪೂರ್ಣ ಇವರ ಜೊತೆ ವೈವಾಹಿಕ ಜೀವನ ಪ್ರಾರಂಭಿಸಿದ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು,ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮಿಂದ ಸಮಾಜಕ್ಕೆ ಒಳ್ಳೆ ಸಂದೇಶ ಹೋಗಬೇಕೆಂಬ ಉದ್ದೇಶದಿಂದ ಮಾತಿಗೂ ಕೃತಿಗೂ ಸಂಬಂಧವಿರಬೇಕೆಂಬ ಉದ್ದೇಶದಿಂದ ವರದಕ್ಷಿಣೆ ವಿರೋಧಿಯಾದ ಇವರು ತಾವು ಒಂದು ಬಿಡಿಗಾಸು ಹಣ,ಬಂಗಾರ ತೆಗೆದುಕೊಳ್ಳದೆ ಮದುವೆಯಾಗಿದ್ದಾರೆ,ಹಾಗೂ ಬೇರೆ ಯುವಕರಿಗೂ ಸ್ಫೂರ್ತಿಯಾಗಿ ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಆಗಲು ಪ್ರೋತ್ಸಾಹ ನೀಡುತ್ತಿದ್ದಾರೆ.
ಶಿಕ್ಷಣ ಪ್ರೇಮಿ ಸುರೇಶ ಬಳೂಟಗಿ

ಶಿಕ್ಷಣ ಪ್ರೇಮಿಯಾದ ಇವರು ಅದಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದು ಸರಕಾರಿ ಶಾಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯವನ್ನು ಸದಾಕಾಲ ಮಾಡುತ್ತಿದ್ದಾರೆ.ಅದರಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಪ್ರತಿ ತಿಂಗಳಿಗೊಮ್ಮೆ ಬಿಸಿ ಊಟದ ಜೊತೆ ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ಊಟ ನೀಡುವ ಕಾಯಕ ಸತತ ಐದು ವರ್ಷಗಳ ಕಾಲ ಮಾಡಿದ್ದರು. ನಂತರ ಮಕ್ಕಳಲ್ಲಿ ಒಳ್ಳೆ ಸಂಸ್ಕಾರ,ಸಂಸ್ಕೃತಿ ಬೆಳೆಸುವ ಸಲುವಾಗಿ ಹಾಗೂ ಹಿರಿಯರ ಬಗ್ಗೆ ಗೌರವ ಭಾವನೆ ಮೂಡಿಸಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕಿಹಳ್ಳಿಯಲ್ಲಿ 2015 ಮತ್ತು 2016 ರಲ್ಲಿ ಜನುಮದಾತರಿಗೊಂದು ನಮನ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡಿಸುವ ಸಮಾರಂಭ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಕೊಪ್ಪಳದ ಗವಿಶ್ರಿಗಳು ಸಾನಿಧ್ಯ ವಹಿಸಿದ್ದರು. ಪ್ರತಿ ವರ್ಷ ತಮ್ಮ ಕುಟುಂಬದಿಂದ ಶಾಲೆಗೆ ಏನಾದರೂ ಕಾಣಿಕೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಕೊರೊನಾ ಹಾವಳಿ ಸಮಯದಲ್ಲಿ ಒಬ್ಬ ಯೋಧನಂತೆ ಕೆಲಸ ಮಾಡಿದ ಬಳೂಟಗಿ
ಕೊರೊನಾ ಸಮಯದಲ್ಲಿ ಬೇರೆ ಜಿಲ್ಲೆ,ಬೇರೆ ರಾಜ್ಯಗಳಿಗೆ ಗುಳೆ ಹೋದ ಜನ ಪರದಾಡುತ್ತಿದ್ದಾಗ ಇಲ್ಲಿಂದಲೇ ತಮ್ಮ ಸಂಪರ್ಕದಲ್ಲಿರುವ ಸಮಾಜಸೇವಕರ ಸಂಪರ್ಕದಿಂದ ಅವರಿಗೆ ಆಹಾರ, ವಸತಿ,ಸಾರಿಗೆ ಸೌಲಭ್ಯ ದೊರಕಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅನ್ಯಾಯ ಅಂತ ಬಂದ ನೊಂದ ಜನರಿಗೆ ನ್ಯಾಯ ಒದಗಿಸುವ ಮಹಾನ್ ನಾಯಕ ಇವರು.
ನೊಂದವರಿಗೆ 24*7 ಸಮಯ ಸೇವೆ
ದಲಿತರ, ಬಡವರ ನೊಂದವರಿಗೆ ದಿನದ 24/7 ಸಮಯ ಮೀಸಲಿಡುವ ಕರುಣಾಮಯಿ.ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯ, ಟಿಪ್ಪರ್ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೀಗೆ ಅನೇಕ ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತಮಗೆ ನೀಡಿದ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ.2015 ರಲ್ಲಿ ಗೊರಸೇನಾ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ನಂತರ ಇವರ ಸಮಾಜ ಸೇವೆಯ ಪ್ರವೃತ್ತಿಯೇ ಬದಲಾಯಿತು.
ರಾಜ್ಯದ ಬಂಜಾರ ಸಮುದಾಯ ಯುವ ನಾಯಕನಾಗಿ ಬೆಳೆದ ಸುರೇಶ ಬಳೂಟಗಿ
ಗೋರ ಸೇನಾದಿಂದ ನಿಸ್ವಾರ್ಥ ಸೇವೆಯ ಮಹತ್ವ ಅರಿತ ಇವರು ಲೀಡರ್ ಬೇಸ್ ನಾಯಕರಾಗದೇ ಕೇಡರ್ ಬೇಸ್ ನಾಯಕರಾದರು.ಇವರ ನೇತೃತ್ವದಲ್ಲಿ 12ಮತ್ತು 13 ನೇ ಅಕ್ಟೋಬರ್ 2019 ರಲ್ಲಿ ಅಂತರಾಷ್ಟ್ರೀಯ ಬಂಜಾರ ಗೋರ ಮಳಾವ ಕಾರ್ಯಕ್ರಮ ಆಯೋಜಿಸಿ ಭಾರತ ದೇಶವಷ್ಟೇ ಅಲ್ಲ ವಿದೇಶದಿಂದಲೂ ಕೂಡ ಲಕ್ಷಾಂತರ ಜನರನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಅಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶ,ತೆಲಂಗಾಣ, ಹಾಗೂ ಗೋವಾ ರಾಜ್ಯಗಳಲ್ಲಿ ನಡೆದ ಅನೇಕ ಸಭೆ ಸಮಾರಂಭಗಳಿಗೆ ಕರ್ನಾಟಕದಿಂದ ಜನರನ್ನು ಕರೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಇವರ ಸಾಮರ್ಥ್ಯ ಗುರುತಿಸಿದ ಗೋರ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಅರುಣ ಚವ್ಹಾಣ ಮತ್ತು ರಾಜ್ಯಾಧ್ಯಕ್ಷರಾದ ರವಿಕಾಂತ ಅಂಗಡಿಯವರು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದರು.
ಸಮಾಜ ಸೇವೆಗೆ ಟೊಂಕಕಟ್ಟಿ ನಿಂತ ಯುವ ನಾಯಕ ಸುರೇಶ್ ಬಳೂಟಗಿ

ನಂತರ ಇವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಗೌರವಿಸುವ ಸಮಾರಂಭ, ಸಮಾಜಕ್ಕೆ ಅನ್ಯಾಯ ಆದಾಗ ಪ್ರತಿಭಟನೆ,ಯಾರಿಗಾದರೂ ಅನ್ಯಾಯವಾದರೆ ನ್ಯಾಯ ದೊರಕಿಸಿಯೇ ಬಿಡುವ ಹಠ ಇವರದು. ಕೊರೋನಾ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣ ಕುಂಠಿತ ಆಗಬಾರದು ಎಂಬ ಉದ್ದೇಶದಿಂದ ಅನೇಕ ಸಮಾಜ ಸೇವಕರ ನೆರವಿನಿಂದ ಬಾಲಸಂಸ್ಕಾರ ಎಂಬ ಟ್ಯೂಷನ್ ತರಬೇತಿ ಕೇಂದ್ರ ಸ್ಥಾಪಿಸಿದರು.ರಾಜಕೀಯದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಇವರ ಆಪ್ತರಾಗಿರುವ ಇವರು ಅವರಿಂದ ಜನರಿಗೆ ಅನೇಕ ಸರಕಾರಿ ಸೌಲಭ್ಯ, ಸಹಾಯ ಸಹಕಾರ ದೊರಕಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಯಾವುದೇ ಸಮುದಾಯದ ಜನರು ತಂಟೆ ತಕರಾರು ಮಾಡಿಕೊಂಡು ಪೊಲೀಸ ಠಾಣೆಯ ಮೆಟ್ಟಿಲೇರಿದರೆ ಅವರನ್ನು ತಿಳಿ ಹೇಳಿ ಕೋರ್ಟ್ ಗೆ ಹೋದರೆ ನಿಮ್ಮ ಸಮಯ, ಹಣ ವ್ಯರ್ಥ ಎಂದು ರಾಜಿ ಸಂಧಾನ ಮಾಡಿಸಿ ಅನೇಕ ಪ್ರಕರಣ ಇತ್ಯರ್ಥ ಪಡಿಸಿದ್ದಾರೆ.
ಇವರ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಸದಾಕಾಲ ಜನಸೇವೆಯೇ ಜನಾರ್ಧನ ಸೇವೆ ಎಂಬ ಮೂಲಮಂತ್ರದೊಂದಿಗೆ ತಮ್ಮ ಸೇವೆಯನ್ನು ಮುಂದುವರಿಸಿದ ಮುಖಂಡ ಇವರು.ಇವರ ಈ ಸಾಧನೆಗೆ ಇವರ ಸಹೋದರ ಮಾವ ಗೋಪಾಲ ನಾಯಕ ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ರೇಣುಕಾ ನಾಯಕ, ಸದಾ ಬೆಂಬಲ ನೀಡಿದ್ದಾರೆ. ಇವರ ಸಹೋದರಿ ಶಾರದಾ ನಾಯಕ ಅವರು ಬಿ. ಇ.ಪದವಿ ಪೂರೈಸಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
