BREAKING : ಗುದ್ನೇಪ್ಪನ ಮಠದ ಜಮೀನು ವಿಚಾರ :’ಭೂಗಳ್ಳರು ನಾವಲ್ಲ, ನೀವು ಭೂಗಳ್ಳರು…!’: ಗ್ರಾಮಸ್ಥರ ಆಕ್ರೋಶ.!!
ಗುದ್ನೇಪ್ಪನ ಮಠದ ಜಮೀನು ವಿಚಾರ : ತೀವ್ರಗೊಂಡ ಪರ-ವಿರೋಧ ಚರ್ಚೆಗಳು!!
ಕುಕನೂರು : ಪಟ್ಟಣದ ಗುದ್ನೇಪ್ಪನ ಮಠದ ಸರ್ವೆ ನಂಬರ್ 78ರ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಹೈಕೋರ್ಟ್ ನಲ್ಲಿ ಪ್ರಕರಣವು ವಿಚಾರಣಾ ಹಂತದಲ್ಲಿದ್ದು, ಆದಾಗ್ಯು ಸಹಿತ ಪರ ವಿರೋಧ ಚರ್ಚೆಗಳು ತಾರಕಕ್ಕೇರಿದೆ.
ಈ ಕುರಿತು ಈಗಾಗಲೇ ಕುಕನೂರು ನಾಗರಿಕ ವೇದಿಕೆ ಹಾಗೂ ವಿವಿಧ ಸಂಘಟನೆಗಳಿಂದ ಕಳೆದ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಲಾಗಿತ್ತು, ತಾಲೂಕಿನ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಾಲೂಕು ಆಡಳಿತಾತ್ಮಕ ಕಚೇರಿಗಳು ಹಾಗೂ ಕೋರ್ಟ್, ಬುದ್ಧ ಬಸವ ಅಂಬೇಡ್ಕರ್ ಭವನ, ತಾಲೂಕು ಕ್ರೀಡಾಂಗಣವೂ ಸರ್ಕಾರಕ್ಕೆ ಸಂಬಂಧಿಸಿದ ಸರ್ವೇ ನಂಬರ್ 78 ರಲ್ಲಿ ಆಗಬೇಕು ಎನ್ನುವುದರ ಒತ್ತಾಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದರು.
ಇದೀಗ ಈ ವಿಚಾರವು ಗುದ್ನೇಪ್ಪನ ಮಠ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಇಂದು ಪಟ್ಟಣದ ಗುದ್ನೇಪ್ಪನ ಮಠದ ಶ್ರೀರುದ್ರಮುನೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ಸೇವಾದಾರರು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು.
ಈ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೀರಯ್ಯ ಇನಾಮ್ದಾರ್, ‘ಗುದ್ನೇಪ್ಪನ ಮಠದ ಜನರು ಭೂಗಳ್ಳರಲ್ಲ, ಸರ್ಕಾರ ನಮ್ಮ ಭೂಮಿಯನ್ನು ಕಸಿದುಕೊಂಡು ನಮ್ಮನ್ನು ಭೂ ವಂಚಿತರನ್ನಾಗಿ ಮಾಡಿ, ಸರ್ಕಾರ ಮತ್ತು ಸರ್ಕಾರದ ಭಾಗವಾಗಿರುವ ಅಧಿಕಾರಿಗಳು ಭೂಗಳ್ಳತನ ಮಾಡುತ್ತಿದ್ದಾರೆ. ತಾಲೂಕಿನ ವಿವಿಧ ಸಂಘಟನೆಗಳಿಗೆ ತಪ್ಪು ಮಾಹಿತಿ ನೀಡಿ ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗುತ್ತದೆ ಎಂದು ಆಕ್ರೋಶ ಭರಿತ ಮಾತುಗಳಿಂದ ಆರೋಪಿಸಿದರು.
‘800 ವರ್ಷಗಳ ಇತಿಹಾಸ ಇರುವ ಶ್ರೀ ರುದ್ರಮುನೇಶ್ವರ ಸ್ವಾಮಿಗಳಿಗೆ ಕುಂತಳಪುರದ ಅರಸರು 188 ಎಕರೆ ಜಮೀನು ಉಂಬಳವಾಗಿ ನೀಡಿದ್ದು ದಾಖಲೆ ಇದೆ. 1954ರ ಪಹಣಿ ಪತ್ರಿಕೆಯಲ್ಲಿ ಸಂಪೂರ್ಣ ಜಮೀನು ಗುದ್ನೇಶ್ವರ ದೇವರ ಪೂಜಾರಿ ಸಂಗನಬಸಯ್ಯ ಮತ್ತು 18 ಜನ ಸೇವಾದಾರರ ಹೆಸರಿನಲ್ಲಿ ದಾಖಲೆಗಳು ಇವೆ. ಪೂಜಾರಿ ಮನೆತನ ದವರಿಗೆ 45 ಎಕರೆ ಹಾಗೂ ಸೇವದಾರರ ಮನೆತನದವರಿಗೆ 40 ಎಕರೆ ಎಂದು ಆದೇಶವಾಗಿತ್ತು, ಸುಮಾರು ವರ್ಷಗಳಿಂದ ಸಾಗುವಳಿ ಇದ್ದು, ನಮ್ಮನ್ನು ಒಕ್ಕಲಿಬ್ಬಿಸಿ ಸದರಿ ಭೂಮಿಯನ್ನು ಕಬಳಿಸುವ ದುರುದ್ದೇಶದಿಂದ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನಮ್ಮಗಳ ಮೇಲೆ ಸುಳ್ಳು ಕ್ರಿಮಿನಲ್ ಕೇಸ್ ಗಳನ್ನ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಈ ಸರ್ವೇ ನಂಬರ್ 78 ರಲ್ಲಿ ಯಾವುದೇ ರೀತಿ ಕಟ್ಟಡಗಳು ಮತ್ತು ಕಾಮಗಾರಿಗಳು ನಡೆಯಬಾರದೆಂದು ಹೈಕೋರ್ಟ್ ತಡೆಯಾದರೆ ನೀಡಿದ್ದರೂ ಸಹಿತ, ಅಧಿಕಾರಿಗಳು ಅಧಿಕ ಪ್ರಸಂಗ ಮಾಡುತ್ತಿದ್ದು, ಕೋರ್ಟ್ ಆದೇಶವನ್ನೇ ಉಲ್ಲಂಘಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮನ್ನು ಭೂಗಳ್ಳರೆಂದು ಸಾರ್ವಜನಿಕವಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ ಇಂಥವರ ವಿರುದ್ಧ ನಾವು ಕಾನೂನು ಸಮರಕ್ಕೆ ಸಿದ್ದರಿದ್ದೇವೆ’ ಎಂದು ಹೇಳಿದರು.
‘ಇದೇ ನವಂಬರ್ 4ರಂದು ಗುದ್ನೇಪ್ಪನ ಮಠದಿಂದ ಕುಕನೂರು ಪಟ್ಟಣದ ವೀರಭದ್ರೇಶ್ವರ ಸರ್ಕಲ್ ಅವರಿಗೆ ನೀಲಗುಂದದ ಪ್ರಭುಲಿಂಗ ದೇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಹಾಗೂ ಆಡಳಿತ ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಲಾಗುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಗುದ್ನೇಪ್ಪನ ಮಠದ ಹಿರಿಯರು ಚನ್ನಬಸಯ್ಯ ದೂಪದ್, ವೀರಯ್ಯ ಬ್ಯಾಳಿ, ವೀರಯ್ಯ ದೇವಗನ್ ಮಠ, ಸಿದ್ಲಿಂಗಯ್ಯ ಬಂಡಿ, ರುದ್ರಯ್ಯ ಸಲುಡಿ ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಮಹೇಶ್ ಕಲ್ಮಠ, ರುದ್ರಯ್ಯ ಇನಾಮ್ದಾರ್, ಪಟ್ಟಣ ಪಂಚಾಯಿತಿ ಸದಸ್ಯ ಜಗನ್ನಾಥ್ ಭೋವಿ, ಶರಣಯ್ಯ ಹುಣಸಿಮರದ್, ರುದ್ರಯ್ಯ ಇರ್ಪಾಪ್ನವರ್ ಮಲ್ಲಯ್ಯ ಹಲಸಿನಮರದ್ ಇನ್ನು ಗ್ರಾಮದ ಯುವಕರು ಉಪಸ್ಥಿತರಿದ್ದರು.