ಪ್ರಜಾ ವೀಕ್ಷಣೆ ಸುದ್ದಿ :
BREAKING : ಮಠದ ಆಸ್ತಿ ರಕ್ಷಣೆಗಾಗಿ ಭಕ್ತರಿಂದ ಬೃಹತ್ ಪ್ರತಿಭಟನೆ! : ಶಾಸಕರು ಕಾನೂನು ಉಲ್ಲಂಘನೆ! : ಶಾಸಕತ್ವ ಅನರ್ಹಗೊಳಿಸಬೇಕು : ತಿಪ್ಪೇರುದ್ರಸ್ವಾಮಿ

ಕುಕನೂರು : ಪಟ್ಟಣದ ರುದ್ರಮುನೇಶ್ವರ (ಗುದ್ನೇಶ್ವರ) ಮಠದ ಜಮೀನು ಉಳಿವಿಗಾಗಿ ಇಂದು ಗುದ್ನೇಶ್ವರ ಸ್ವಾಮಿಯ ಭಕ್ತ ಗಣದ ವತಿಯಿಂದ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಲಾಯಿತು.

ಈ ಬೃಹತ್ ಪ್ರತಿಭಟನಾ ರ‍್ಯಾಲಿಯು ಗುದ್ನೇಶ್ವರ ಮಠದಿಂದ ಆರಂಭವಾಗಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದವರೆಗೆ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಯಿತು. ಗೋರ್ ಸೇನಾ-ಕರ್ನಾಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಮಾತನಾಡಿ, “ಮಾನ್ಯ ಶಾಸಕ ರಾಯರೆಡ್ಡಿ ಅವರೇ, ಊರಿನ ಜಾಗ ಸರ್ಕಾರದಲ್ಲ, ಅದು ಗ್ರಾಮದವರದ್ದು (ಲಕ್ಷಾಂತರ ಭಕ್ತರದ್ದು), ಅದರದೊಂದು ತೀರ್ಮಾನ ಮುಂದೊಂದು ದಿನ ಆಗುತ್ತೆ!!, ಅಲ್ಲಿವರೆಗೆ ನೀವು ಕಾಯಿಲೇ ಬೇಕು. ಈ ಹೋರಾಟ ಚೀರಾಟ ಬಂದ್ ನಾಟಕ ನಡೆಯುವುದಿಲ್ಲ, ಅಧಿಕಾರಿಗಳನ್ನು ಉಪಯೋಗಿಸಿ ಗ್ರಾಮದವರಿಗೆ ಭಯಪಡಿಸಿ ಅವರನ್ನು ಸುಮ್ಮನಿರಸಬಹುದು, ಆದರೆ ಈ ಎಲ್ಲ ಬೆಳವಣಿಗೆ ತಾಲೂಕಿನ ಜನ, ಜಿಲ್ಲೆಯ ಜನ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.

ಆ ಬಡ ಅರ್ಚಕರು ಹಾಗೂ ಸೇವಾದಾರರ ಬೆನ್ನಿಗೆ ಬಂಜಾರ (ಲಂಬಾಣಿ) ಸಮುದಾಯ ನಿಂತಿದೆ. ನಿಮ್ಮ ಈ ರಾಜಕೀಯ ಡೊಂಬರಾಟ ಇನ್ಮುಂದೆ ನಡೆಯಲ್ಲ, ನಿಮ್ಮ ರಾಜಕೀಯ ಭವಿಷ್ಯವನ್ನು ನಾವು ಮತಗಟ್ಟೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ನೇರವಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿಯ ನಿಕಟ ಪೂರ್ವ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್, ‘ಗುದ್ನೇಪ್ಪನ ಮಠದ ಜಮೀನನ್ನು ಸರ್ಕಾರ ಕಬಳಿಸುತ್ತಿರುವುದು ಖಂಡನೀಯ ವಿಚಾರವಾಗಿದೆ. 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಠದ ಆಸ್ತಿಗಾಗಿ ಇಲ್ಲಿನ ಶಾಸಕರು ಕೀಳು ಮಟ್ಟದ ರಾಜಕಾರಣವನ್ನು ಆರಂಭಿಸಿದ್ದಾರೆ. ಕಳೆದ ಸೋಮವಾರದಂದು “ಕುಕನೂರು ಪಟ್ಟಣ ಬಂದ್” ಮಾಡಿ ಯಾರ ವಿರುದ್ಧವಾಗಿ ಪ್ರತಿಭಟನೆ ಮಾಡಿದ್ದೀರಿ ಅನ್ನುವುದೇ ಅರ್ಥವಾಗುತ್ತಿಲ್ಲ?, ಶ್ರೀ ಮಠದ ಜಮೀನನ್ನು ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದ್ದು, ಬೇಕಾದಷ್ಟು ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿದೆ. ಇನ್ನುಳಿದ ಕೆಲವೇ ಕೆಲವು ಜಮೀನಲ್ಲಿ ಶ್ರೀ ಮಠ ಹಾಗೂ ಜನ ವಾಸವಿದ್ದು, ಜಿಲ್ಲೆಯ ಎರಡನೆಯ ಅತಿ ದೊಡ್ಡ ಜಾತ್ರೆ ಎಂದು ಪ್ರಖ್ಯಾತಿಗೊಂಡಿರುವ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚ ಕಳಸ ಮಹಾ ರಥೋತ್ಸವ ಪ್ರತಿ ವರ್ಷ ನಡೆಯುತ್ತಿದೆ, ಈ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರಲಿದ್ದು, ಹಾಗಾಗಿ ಈ ಜಮೀನು ಅವಶ್ಯಕತೆ ಇದೆ. ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡದೀರಿ. ಇಲ್ಲವಾದಲ್ಲಿ ಶ್ರೀ ರುದ್ರಮುನೇಶ್ವರನ ಶಾಪಕ್ಕೆ ತುತ್ತಾಗುತ್ತೀರಿ! ನೀವೇ ಹೇಳುವ ಹಾಗೆ ನಿಮ್ಮ ಸರ್ಕಾರದಲ್ಲಿ ಅಭಿವೃದ್ಧಿಗೆ ಸಾಕಷ್ಟು ಹಣ ಇದೆ. ತಾಲೂಕಿನ ಆಡಳಿತಾತ್ಮಕ ಹಿತ ದೃಷ್ಟಿಯಿಂದ ದೇವಸ್ಥಾನದ ಜಮೀನು ಬಿಟ್ಟು ಬೇರೆಡೆಗೆ ತಾಲೂಕ ಆಡಳಿತದ ಕಚೇರಿಗಳು ಬೇರೆಡೆಗೆ ಕಟ್ಟಿಸಿ ಎಂದು ಹೇಳಿದರು.
“ನಿಮ್ಮನ್ನ ಶಾಸಕರನ್ನಾಗಿ ಮಾಡಿದ್ದು ಈ ಕ್ಷೇತ್ರದ ಜನ, ಹಾಗಾಗಿ ಕ್ಷೇತ್ರದ ಎಲ್ಲ ಜನರ ಹಿತಕ್ಕಾಗಿ ನೀವು ಇರಬೇಕಾಗಿದ್ದು ನಿಮ್ಮ ಆದ್ಯ ಕರ್ತವ್ಯ. ಬಡ ಅರ್ಚಕರು ಹಾಗೂ ಸೇವಾದಾರರಿಗೆ ಸೇರಿದ ಹಾಗೂ ಲಕ್ಷಾಂತರ ಭಕ್ತರ ಶ್ರದ್ದಾ ಕೇಂದ್ರದ ಭೂಮಿಯನ್ನು ಕಬಳಿಸುವುದಕ್ಕೆ ಹೊಂಚು ಹಾಕುತ್ತಿದ್ದೀರಾ?, ಇದು ಸಾಧ್ಯವಿಲ್ಲ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಇಂದು ನಡೆದ ಪ್ರತಿಭಟನೆಯು ಬಹುತೇಕ ಶಾಂತಿಯುತವಾಗಿ ಜರುಗಿದ್ದು ಸುಮಾರು 2ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ಅದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ತಿಳಿಸಿದರು.

“ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಹಲವು ಬಾರಿ ಈ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದು ಶಾಸಕರಿಗೆ ಈ ಕ್ಷೇತ್ರದ ಇತಿಹಾಸದ ಪರಿವೇ ಇಲ್ಲದಂತೆ ಕಾಣುವುದು ಆಶ್ಚರ್ಯಕರವಾಗಿದೆ. ಅವರ ಕ್ಷೇತ್ರದಲ್ಲಿ ಬರುವ ಶ್ರೀರುದ್ರಮುನೇಶ್ವರ (ಗುದ್ನೇಶ್ವರ) ಮಠವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು ಇಲ್ಲಿರುವ ಶ್ರೀಮಠದ ಜಾಗವನ್ನು ಕುಂತಳರಾಜ್ಯದ ರಾಜರು ಅರ್ಚಕರು, ಸೇವಾದಾರರು ಹಾಗೂ ಭಕ್ತರ ಅನುಕೂಲಕ್ಕೆ ಎಂದು ನೀಡಿದ ಜಮೀನಾಗಿದ್ದು ಆ ಜಮೀನನ್ನು ಸರ್ಕಾರದೆಂದು ಹಿಂಪಡೆಯಲು ಶಾಸಕರು ಹಲವು ರೀತಿಯ ಕಸರತ್ತು ನಡೆಸಿದ್ದು ಇದರಿಂದ ನೊಂದಿರುವ ಅರ್ಚಕರು, ಸೇವಾದಾರರು ಹಾಗೂ ಭಕ್ತರು ಜಮೀನಿನ ವಿಷಯ ಕುರಿತಂತೆ ಉಚ್ಚ ನ್ಯಾಯಾಲಯದಲ್ಲಿ ಮೊಖದ್ದಮೆ ಹೂಡಿದ್ದು ಇದೆಲ್ಲಾ ಗೊತ್ತಿದ್ದರೂ ಸಹ ಶಾಸಕರು ಪರೋಕ್ಷವಾಗಿ ಈ ಜಮೀನಿಗೆ ಸಂಬಂಧಿಸಿದಂತೆ ಪಟ್ಟಣವನ್ನು ಬಂದ್ ಮಾಡಿಸಿದ್ದು ಶಾಸಕರು ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಆದ್ದರಿಂದ ಅವರು ಶಾಸಕರಾಗಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿದ್ದು ಅವರ ವಿರುದ್ಧ ರಾಜ್ಯದ ರಾಜಪಾಲರಿಗೆ ರಾಯರೆಡ್ಡಿ ಅವರ ಶಾಸಕತ್ವ ಅನರ್ಹಗೊಳಿಸಬೇಕು ಎಂದು ಮನವಿಯನ್ನು ಸಲ್ಲಿಸಲಾಗುವುದು”
ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ