LOCAL NEWS : ಇದೇ ಡಿ.27–28ರಂದು ಇಟಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವಜ್ರ ಮಹೋತ್ಸವ ಅದ್ದೂರಿ ಕಾರ್ಯಕ್ರಮ
ಡಿ.27–28ರಂದು ಶಾಲಾ ಆವರಣದಲ್ಲಿ ವಿಜೃಂಭಣೆಯ ಕಾರ್ಯಕ್ರಮ
ಪ್ರಜಾವೀಕ್ಷಣೆ ಸುದ್ದಿ :
ಕುಕನೂರ : ತಾಲ್ಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮವು ಡಿ. 27 ಹಾಗೂ 28ರಂದು ಎರಡು ದಿನಗಳ ಕಾಲ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ವಜ್ರ ಮಹೋತ್ಸವ ಆಚರಣಾ ಸಮಿತಿ ಹಾಗೂ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಇಟಗಿ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ನವೀನಕುಮಾರ ಗುಳಗಣ್ಣವರ, ‘ಅವರು, 1950ರಲ್ಲಿ ಸ್ಥಾಪನೆಯಾದ ಈ ಶಾಲೆಯು ಕಳೆದ 75 ವರ್ಷಗಳಿಂದ ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಅನೇಕ ಸಾಧಕರನ್ನು ನೀಡಿದೆ ಎಂದು ತಿಳಿಸಿದರು. ವಜ್ರ ಮಹೋತ್ಸವವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಡಿ.27ರಂದು ಬೆಳಿಗ್ಗೆ 9 ಗಂಟೆಗೆ ನಿವೃತ್ತ ಪ್ರಾಚಾರ್ಯ ಶ್ರೀಧರ ದೀಕ್ಷಿತ್ (ಧಾರವಾಡ) ಅವರಿಂದ ಮಹಾಸರಸ್ವತಿ ಭಾವಚಿತ್ರಕ್ಕೆ ಪೂಜೆ ನೆರವೇರಲಿದೆ. ನಂತರ ವೆಂಕಟರಾವ್ ಕುಲಕರ್ಣಿ ಅವರ ಕಂಚಿನ ಮೂರ್ತಿ ಮೆರವಣಿಗೆ, ಕರಡಿ ಮಜಲು, ಡೊಳ್ಳು ಕುಣಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿವೆ.
ಮಹಾದೇವ ದೇವಸ್ಥಾನದಿಂದ ಶಾಲಾ ಆವರಣದವರೆಗೆ ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ಜರುಗಲಿದ್ದು, ಶಾಲೆಯ ಭಾವಚಿತ್ರಗಳು ಹಾಗೂ ಸ್ತಬ್ಧಚಿತ್ರಗಳ ಪ್ರದರ್ಶನವೂ ಆಯೋಜಿಸಲಾಗಿದೆ.
ಬಳಿಕ ಬೆಳಿಗ್ಗೆ 11 ಗಂಟೆಗೆ ನಡೆಯುವ ಮುಖ್ಯ ಸಮಾರಂಭದಲ್ಲಿ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಮುಂಡರಗಿಯ ಅನ್ನದಾನೀಶ್ವರ ಶಾಖಾಮಠದ ಕುಕನೂರಿನ ಮಹಾದೇವ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಿವರಾಜ ತಂಗಡಗಿ ಅವರು, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಭಜಂತ್ರಿ ಅವರು ವಹಿಸಿಕೊಳ್ಳಲಿದ್ದಾರೆ.
ವಜ್ರ ಮಹೋತ್ಸವದ ಅಂಗವಾಗಿ 75ನೇ ವರ್ಷದ ವಿಶೇಷ ಧ್ವಜಾರೋಹಣವನ್ನು ನವೀನಕುಮಾರ ಈಶಣ್ಣ ಗುಳಗಣ್ಣವರ ನೆರವೇರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ 75 ವರ್ಷಗಳ ಇತಿಹಾಸವನ್ನು ಒಳಗೊಂಡ ‘ವಜ್ರಸಿರಿ’ ಸ್ಮರಣಿಕೆ ಹಾಗೂ ವಜ್ರ ಮಹೋತ್ಸವ ಗೀತೆ ಬಿಡುಗಡೆಗೊಳ್ಳಲಿದೆ. ವಜ್ರ ಮಹೋತ್ಸವ ಗೀತೆಯನ್ನು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಬಿ.ಎಂ. ಹಳ್ಳಿ ರಚಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಗೌರವ ಸನ್ಮಾನ ನಡೆಯಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ನರೇಗಲ್‌ನ ಪ್ರಾಂಶುಪಾಲ ಸಂಗಪ್ಪ ಗುಳಗಣ್ಣವರ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ. ಜಾನಪದ ಕಲಾವಿದ ಜೀವನಸಾಬ್ ವಾಲಿಕರ್ ಅವರಿಂದ ಹಾಸ್ಯ ಸಂಜೆ “ನಗೆ ಹಬ್ಬ” ನಡೆಯಲಿದ್ದು, ಶಾಲಾ ವಿದ್ಯಾರ್ಥಿಗಳಿಂದ ರಸಮಂಜರಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
• ಡಿ.28ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಗವಿಮಠದ ಸಂಸ್ಥಾನದ ಜಗದ್ಗುರುಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹಾಗೂ ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ರಾಜಶೇಖರ್ ಹಿಟ್ನಾಳ ಅವರು ನೆರವೇರಿಸಲಿದ್ದು, ಕಾರ್ಯಕ್ರಮ ಜ್ಯೋತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಲಿಂಗರಾಜ್ ಹೊಸಭಾವಿ, ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪ ಮುಖ್ಯ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಎ.ಸಿ., ಕರಣ್ ಕುಮಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಯಲಬುರ್ಗಾ ಬಿ ಇ ಒ ಅಶೋಕಗೌಡ ಅವರು ಸೇರಿದಂತೆ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಬಿ.ಎಂ. ಹಳ್ಳಿ, ಸಿದ್ದಪ್ಪ ಸಜ್ಜನ್, ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜ್ ಹೊಸಭಾವಿ, ರತ್ನಮ್ಮ ಭಜಂತ್ರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭುರಾಜ್ ಹಳ್ಳಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ಮಹೇಶ್ ದೊಡ್ಮನಿ, ವಿರುಪಾಕ್ಷಪ್ಪ ಹುರುಳಿ, ಶರಣಪ್ಪ ಅರಿಕೇರಿ, ಮಹೇಶ್ ಹಿರೇಮನಿ, ಶಾಲೆಯ ಶಿಕ್ಷಕರಾದ ವೀರಣ್ಣ ಕೊನಾರಿ ಸೇರಿದಂತೆ ಇತರೆ ಶಿಕ್ಷಕರು ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.