LOCAL NEWS : ಕುಕನೂರು | ಚಂಡೂರು ರೈತರ ಭೂಮಿಯಲ್ಲಿ ಭೂ ವಂಚನೆ : ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ!

You are currently viewing LOCAL NEWS : ಕುಕನೂರು | ಚಂಡೂರು ರೈತರ ಭೂಮಿಯಲ್ಲಿ ಭೂ ವಂಚನೆ : ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ!

LOCAL NEWS : ಕುಕನೂರು | ಚಂಡೂರು ರೈತರ ಭೂಮಿಯಲ್ಲಿ ಭೂ ವಂಚನೆ : ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ!

 ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ  : 

ಕುಕನೂರು ಫೆ. 10 : ತಾಲ್ಲೂಕಿನ ಚಂಡೂರು ಗ್ರಾಮದ ಪರಿಶಿಷ್ಟ ಜಾತಿಯ ಜನಾಂಗಕ್ಕೆ ಸೇರಿದ ಪಿತ್ರಾರ್ಜಿತ ಭೂಮಿಯಲ್ಲಿ ಭೂ ವಂಚನೆ ನಡೆಯಿದ್ದು, ಅದೇ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಅಕ್ರಮವಾಗಿ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ವಿರೋಧಿಸಿ ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ (ಕಾದ್ರೊಳ್ಳಿ ಬಣ) ಕಾರ್ಯಕರ್ತರು ಇಂದು (ಮಂಗಳವಾರ) ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಈ ಧರಣಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಬೆಣಕಲ್ ಅವರು, ‘ಪಿತ್ರಾರ್ಜಿತ ಭೂಮಿಯು ಸರ್ವೆ ನಂ.76ರಲ್ಲಿನ 17 ಎಕರೆ 39 ಗುಂಟೆ ಭೂಮಿಯಾಗಿದೆ. 1954ರಿಂದ 1979ರವರೆಗೆ ಭೂಮಿ ಮೂಲ ಮಾಲೀಕರ ಹೆಸರಿನಲ್ಲಿ ದಾಖಲಾಗಿತ್ತು. ಆದರೆ 1979ರ ನಂತರ ಯಾವುದೇ ಕಾನೂನುಬದ್ಧ ಖರೀದಿ ಪ್ರಕ್ರಿಯೆ, ಮ್ಯೂಟೇಷನ್ ದಾಖಲೆಗಳು ಅಥವಾ ವಾರಸುದಾರರ ಅನುಮತಿ ಪಡೆಯದೇ ಕರಿಯಪ್ಪ ತಂದೆ ಹನುಮಪ್ಪ ಜ್ಯೋತಿ ಎಂಬವರು ಅಕ್ರಮವಾಗಿ ತಮ್ಮ ಹೆಸರಿಗೆ ಭೂಮಿಯನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಮೂಲ ಭೂಮಾಲೀಕರ ಅನುಮತಿ ಇಲ್ಲದೇ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದು ದಲಿತ ರೈತರ ಹಕ್ಕುಗಳ ಮೇಲೆ ನೇರ ದಾಳಿಯಾಗಿದೆ ಎಂದು ಹೇಳಿದರು.

‘ಕೂಡಲೇ ಅಕ್ರಮ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಭೂ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಿ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಮತ್ತು ಭೂಮಿಯನ್ನು ಮೂಲ ಮಾಲೀಕರಿಗೆ ಮರಳಿ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಡಿಜಿಟಲ್ ಜಾಹೀರಾತು

ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಗ್ರೇಡ್–2 ತಹಸೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ಅವರು, ಮೂರು ದಿನಗಳೊಳಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ತಾಲೂಕು ಅಧ್ಯಕ್ಷ ಶ್ರೀಕಾಂತ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಯಪ್ಪ ಡಿ. ಮಣ್ಣಿನವರ, ಜಿಲ್ಲಾ ಪ್ರಧಾನ ಸಂಚಾಲಕ ಮೈಲಾಪ್ಪ ಮಾದಿನೂರು, ತಾಲೂಕು ಪ್ರಧಾನ ಕಾರ್ಯದರ್ಶಿ ಲೋಹಿತ್ ಬಳಗೇರಿ, ರೈತ ಮುಖಂಡ ಈರಪ್ಪ ಹಿರೇಮನಿ (ಚಂಡೂರು), ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಮಠದ, ಸಂಜೀವ್ ಮೂರ್ತಿ, ಯಲ್ಲಪ್ಪ ಮೆಳ್ಳಿಕೇರಿ, ಮಾರುತಿ ದೊಡ್ಡಮನಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Leave a Reply

error: Content is protected !!