LOCAL NEWS : ಇಟಗಿಯಲ್ಲಿ ನಾಳೆ ಹಿಂದೂ ಸಮಾಜೋತ್ಸವ: ಬೃಹತ್ ಶೋಭಾಯಾತ್ರೆ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ: ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಮಾ. 8ರಂದು ಹಿಂದೂ ಸಮಾಜೋತ್ಸವ ಅಂಗವಾಗಿ ಬೃಹತ್ ಶೋಭಾಯಾತ್ರೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲಿದೆ ಎಂದು ಗ್ರಾಮದ ಯುವ ಮುಖಂಡ ಹಾಗೂ ಕೊಪ್ಪಳ (ಭಾಜಪಾ)ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಹೇಳಿದರು.
ಶುಕ್ರವಾರ ಗ್ರಾಮದ ಮಹೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಭಾವನೆಯನ್ನು ಸಮಾಜದಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಜಾತಿಯವರು ಒಟ್ಟಾಗಿ ಭಾಗವಹಿಸುತ್ತಿರುವುದು ವಿಶೇಷ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ವೇಷಭೂಷಣಗಳು, ಕ್ರಾಂತಿಕಾರಿ ನಾಯಕರ ಭಾವಚಿತ್ರಗಳು, ಭಜನೆ, ಸೋಬಾನ ಪದಗಳು ಹಾಗೂ ವಿವಿಧ ವೇಷಧಾರಿಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಆರ್‌ಎಸ್‌ಎಸ್ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣ್ ಕುಮಾರ್ ಜಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಮಹದೇವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಇಟಗಿ ಗ್ರಾಮದ ಸಮಾಜ ಸೇವಕಿ ಹುಲಿಗೆಮ್ಮ ಹುರಕಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಮಹೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಿ ಗ್ರಾಮದ ವೃತ್ತ ಹಾಗೂ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಮತ್ತೆ ದೇವಸ್ಥಾನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
8 ರಿಂದ 10 ಕಲಾ ತಂಡಗಳು ಭಾಗವಹಿಸಿ ಕೋಲಾಟ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಿ.ಎಂ. ಹಳ್ಳಿ, ಮಹೇಶ್ ದೊಡ್ಡಮನಿ, ಬಸನಗೌಡ ಮುದ್ದಾಬಳ್ಳಿ ಮಾತನಾಡಿದರು. ವಿರೂಪಾಕ್ಷಪ್ಪ ಹುಬ್ಬಳ್ಳಿ, ಪ್ರಭುರಾಜ್ ಹಳ್ಳಿ, ಅಂದಪ್ಪ ಹುರುಳಿ, ಶಾಂತಯ್ಯ ಕಂತಿ, ಸೋಮಣ್ಣ ಬಡಿಗೇರ್, ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.