You are currently viewing LOCAL BREAKING : ಕುಕನೂರು ಪ.ಪಂ.ಸಾಮಾನ್ಯ ಸಭೆ : ಆಡಳಿತ ಮಂಡಳಿ ವಿರುದ್ಧ ಆಕ್ರೋಶ : ಬಿಜೆಪಿ ಸದಸ್ಯರಿಂದ ಸಭೆ ಬಹಿಷ್ಕಾರ!

LOCAL BREAKING : ಕುಕನೂರು ಪ.ಪಂ.ಸಾಮಾನ್ಯ ಸಭೆ : ಆಡಳಿತ ಮಂಡಳಿ ವಿರುದ್ಧ ಆಕ್ರೋಶ : ಬಿಜೆಪಿ ಸದಸ್ಯರಿಂದ ಸಭೆ ಬಹಿಷ್ಕಾರ!

LOCAL BREAKING : ಕುಕನೂರು ಪ.ಪಂ.ಸಾಮಾನ್ಯ ಸಭೆ : ಆಡಳಿತ ಮಂಡಳಿ ವಿರುದ್ಧ ಆಕ್ರೋಶ : ಬಿಜೆಪಿ ಸದಸ್ಯರಿಂದ ಸಭೆ ಬಹಿಷ್ಕಾರ!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :

ಕುಕನೂರು, ಮಾರ್ಚ್-17 :ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ರಾಜಕೀಯ ತೀವ್ರತೆ, ಸದಸ್ಯರ ಆಕ್ರೋಶ ಹಾಗೂ ಮೂಲಭೂತ ಸೌಕರ್ಯಗಳ ಕುರಿತ ಅಸಮಾಧಾನದಿಂದ ಗೊಂದಲದ ಗೂಡಾಗಿ ಪರಿಣಮಿಸಿದ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷೆಯಾಗಿ ಎರಡನೇ ಅವಧಿಗೆ ನೇಮಕಗೊಂಡ ಲೀಲಾವತಿ ಪ್ರವೀಣ್ ಕುಮಾರ್ ಮುಧೋಳ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಆದರೆ ಬಿಜೆಪಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಗೈರಾಗಿದ್ದು, ಆಡಳಿತರೂಢ ಕಾಂಗ್ರೆಸ್ ಸದಸ್ಯರೊಂದಿಗೆ ಮಾತ್ರ ಸಭೆ ಮುಂದುವರಿದಿತು.

ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆ, ಚರಂಡಿ ಸ್ವಚ್ಛತೆ ಕೊರತೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಾವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ಸಮಸ್ಯೆಗಳಿಗಾಗಿ ನೇರವಾಗಿ ನಮ್ಮ ಮನೆಗಳಿಗೆ ಬಂದು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಇದೇ ವೇಳೆ ಬಿಜೆಪಿ ಸದಸ್ಯರು ವಾರ್ಡ್ ಅಭಿವೃದ್ಧಿ ಕಾಮಗಾರಿಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವಿಪಕ್ಷ ಸದಸ್ಯರ ವಾರ್ಡ್‌ಗಳಲ್ಲಿ ನಡೆದ ಕಾಮಗಾರಿಗಳ ಮಾಹಿತಿ ಹಾಗೂ ವೆಚ್ಚದ ಲೆಕ್ಕಪತ್ರ ನೀಡಲಾಗುತ್ತಿಲ್ಲ ಎಂದು ದೂರಿದರು. ತಮ್ಮ ಪಕ್ಷದ ಸದಸ್ಯರಿರುವ ವಾರ್ಡ್‌ಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಉದ್ದೇಶಪೂರ್ವಕ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಪಟ್ಟಣದ 17ನೇ ವಾರ್ಡ್‌ನಲ್ಲಿ ಕುಡಿಯುವ ನೀರು, ಒಳಚರಂಡಿ ಹಾಗೂ ಮಹಿಳಾ ಸಾರ್ವಜನಿಕ ಶೌಚಾಲಯದ ಸಮಸ್ಯೆಗಳು ತೀವ್ರವಾಗಿದ್ದರೂ, ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಪ.ಪಂ.ಮುಖ್ಯಾಧಿಕಾರಿ ನಾಗೇಶ್

ಸಭೆಯ ಬಳಿಕ ಬಿಜೆಪಿ ಸದಸ್ಯರು ಮುಖ್ಯಾಧಿಕಾರಿ ನಾಗೇಶ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಕೆಲಕಾಲ ಹೈಡ್ರಾಮಾ ಸೃಷ್ಟಿಯಾಯಿತು.

ಈ ಸಭೆಯಲ್ಲಿ ಸದಸ್ಯ ಗಗನ ನೋಟಗಾರ ಆರೋಗ್ಯನಗರ ಹಾಗೂ ರಾಯರೆಡ್ಡಿ ಕಾಲೋನಿಗಳಲ್ಲಿ ನಿರ್ಮಿಸಿರುವ ಸಿಸಿ ರಸ್ತೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಸಿರಾಜ್ ಕರ್ಮಡಿ ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಹಾಗೂ ಚರಂಡಿ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ನಾಗೇಶ್ ಅವರು ಕುಕನೂರು ಹಾಗೂ ಯಲಬುರ್ಗಾ ಪಟ್ಟಣ ಪಂಚಾಯಿತಿಗಳಲ್ಲಿ ಒಂದೇ ವೇಳೆ ಕಾರ್ಯನಿರ್ವಹಿಸುತ್ತಿರುವುದರಿಂದ ಕುಕನೂರಿನ ಕಾರ್ಯಗಳಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತು. ಯಲಬುರ್ಗಾಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ಇಲ್ಲಿಯೂ ಸಮಾನ ಗಮನ ಹರಿಸಬೇಕು ಎಂದು ಸದಸ್ಯರು ಮನವಿ ಮಾಡಿದರು.

ಪಟ್ಟಣದಲ್ಲಿ ಪಾದಚಾರಿ ಮಾರ್ಗಗಳು ಆಕ್ರಮಣಕ್ಕೊಳಗಾಗಿರುವುದರಿಂದ ಪಾದಚಾರಿಗಳಿಗೆ ಅಪಾಯ ಉಂಟಾಗಿದೆ. ಫುಟ್‌ಪಾತ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಇದೇ ವೇಳೆ ಆಸ್ತಿ ತೆರಿಗೆ ಪರಿಷ್ಕರಣೆಯಲ್ಲಿ 5% ಹೆಚ್ಚಳದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ, ಗರಿಷ್ಠ 3% ಮಾತ್ರ ಹೆಚ್ಚಳ ಮಾಡಬೇಕು ಎಂದು ಸದಸ್ಯರು ಸೂಚಿಸಿದರು.

 “ಅಭಿವೃದ್ಧಿ ಚರ್ಚೆಗೆ ವಿರೋಧ ಪಕ್ಷದವರಿಗೆ ಆಸಕ್ತಿ ಇಲ್ಲ. ಸಭೆಗೆ ಅಗತ್ಯ ಕೋರಂ ಇದ್ದುದರಿಂದ ಸಭೆ ನಡೆಸಲಾಗಿದೆ. ಸಭೆಯನ್ನು ಬಹಿಷ್ಕರಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಅಡ್ಡಿಪಡಿಸಲಾಗುತ್ತಿದೆ “

ಲೀಲಾವತಿ ಪ್ರವೀಣ್ ಕುಮಾರ್ ಮುಧೋಳ,
ಅಧ್ಯಕ್ಷೆ, ಪ.ಪಂ. ಕುಕನೂರು.

ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಮುಖ್ಯಾಧಿಕಾರಿ ನಾಗೇಶ್, ಪಟ್ಟಣ ಪಂಚಾಯಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

error: Content is protected !!