LOCAL NEWS : ಕುಕನೂರು | ಪಟ್ಟಣದಲ್ಲಿ ಅಪಾಯವನ್ನು ಆಹ್ವಾನಿಸುತ್ತಿರುವ ರಸ್ತೆ ಗುಂಡಿಗಳು : ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಸ್ಥಳೀಯ ಆಡಳಿತ!
ಪ್ರಜಾ ವೀಕ್ಷಣೆ ವಿಶೇಷ ವರದಿ :
ಕುಕನೂರು, ಮಾರ್ಚ್ 18 : ಕಳೆದ ಕೆಲವು ತಿಂಗಳಿಂದ ಪಟ್ಟಣದ ಪ್ರಮುಖ ರಸ್ತೆಗಳು ಅಕ್ಷರಶಃ ಸಾವಿನ ಬಲೆಗಳಾಗಿ ಮಾರ್ಪಟ್ಟಿವೆ. ರಸ್ತೆಯೋ ಅಥವಾ ಗುಂಡಿಯೋ ಎಂದು ಗುರುತಿಸಲಾಗದ ಮಟ್ಟಿಗೆ ರಸ್ತೆಗಳು ಹದಗೆಟ್ಟಿದ್ದರೂ, ಸ್ಥಳೀಯ ಆಡಳಿತ ಮಾತ್ರ ಅದಕ್ಕೂ ತನಗೂ ಸಂಬಂಧವಿಲ್ಲದಂತೆ ‘ಜಾಣ ಕುರುಡುತನ’ ಪ್ರದರ್ಶಿಸುತ್ತಿದೆ.
ಪಟ್ಟಣದ ಪೊಲೀಸ್ ಠಾಣೆಯ ರಸ್ತೆ, ಬಸ್ ನಿಲ್ದಾಣದ ಮುಂಭಾಗ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರದಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಾಯಿ ತೆರೆದು ಕುಳಿತಿವೆ. ದ್ವಿಚಕ್ರ ವಾಹನ ಸವಾರರು ಈ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೀಳುವುದು ಇಲ್ಲಿ ನಿತ್ಯದ ಘಟನೆಯಾಗಿದೆ. ರಾತ್ರಿ ವೇಳೆಯಂತೂ ಬೀದಿ ದೀಪಗಳ ಕೊರತೆಯಿಂದಾಗಿ ಈ ಗುಂಡಿಗಳು ವಾಹನ ಸವಾರರಿಗೆ ಮೃತ್ಯುಪಾಶವಾಗಿ ಪರಿಣಮಿಸಿವೆ. ಈಗಾಗಲೇ ಹಲವಾರು ಸಣ್ಣ-ಪುಟ್ಟ ಅಪಘಾತಗಳು ಸಂಭವಿಸಿವೆ.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ :
ಬಿಸಿಲಿದ್ದರೆ ಧೂಳಿನ ಮಯ, ಮಳೆಯಾದರೆ ಕೆಸರಿನ ಗದ್ದೆ – ಇದೇ ಪಟ್ಟಣದ ರಸ್ತೆಗಳ ಇಂದಿನ ಸ್ಥಿತಿ. ಮಳೆ ಬಿದ್ದಾಗ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಅವುಗಳ ಆಳ ತಿಳಿಯದೆ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು ರಸ್ತೆ ದಾಟಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖವಾಗಿ ಪಟ್ಟಣದ ಸ್ಥಳೀಯ ಆಡಳಿತವಾದ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಕೇವಲ 150 ರಿಂದ 200 ಮೀಟರ್ ಗಳಷ್ಟು ಅಂತರದಲ್ಲಿ ಇರುವ ಹಳೆ ಪಟ್ಟಣ ಪಂಚಾಯತಿ ಕಾರ್ಯಾಲಯ ಮತ್ತು ಪೊಲೀಸ್ ಠಾಣೆ ರಸ್ತೆ ಅಭಿವೃದ್ಧಿಗೆಂದು ಕಿತ್ತು ಹಾಕಿದ್ದು, ತಿಂಗಳುಗಳ ಕಳೆದರೂ ಸಹ ಅಧಿಕಾರಿಗಳು ತಮಗೂ ಈ ರಸ್ತೆಗೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರರು ಮಾತ್ರ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅಧಿಕಾರಿಗಳ ವಿರುದ್ಧ ಇಡೀ ಶಾಪ ಹಾಕುತಿದ್ದಾರೆ.
“ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಿತ್ತುಹಾಕಿದ್ದು, ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಅಲ್ಲಿ ಪೈಪ್ ಲೈನ್ ಹೊಡೆದಿದ್ದು, ಮಾಹಿತಿ ಇತ್ತೀಚಿಗೆ ಅಷ್ಟೇ ನನಗೆ ಗೊತ್ತಾಗಿದೆ. ಶೀಘ್ರದಲ್ಲಿ ಆ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡುತ್ತೇನೆ ಮತ್ತು ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಒತ್ತಾಯಿಸುತ್ತೇನೆ”