BREAKING NEWS : ತುಮಕೂರು | ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಆಧಿಕಾರಿ..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ತುಮಕೂರು, ಮಾರ್ಚ್ 25 : ತುಮಕೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಕಚೇರಿಯ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಎಂ.ಎಚ್. ಅರವಿಂದ್ ಅವರು ಇಂದು (ಬುಧವಾರ) ಸಂಜೆ 12 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ತಿಪಟೂರಿನ ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕೆ. ರಾಜಶೇಖರ್ ಅವರು 2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯ 10 ತಾಲ್ಲೂಕುಗಳ ಸಂತೆ ಮತ್ತು ಜಾತ್ರೆಗಳಲ್ಲಿ ಆರೋಗ್ಯ ಜಾಗೃತಿ ವಸ್ತುಪ್ರದರ್ಶನ ನಡೆಸಿಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಂದಾಜು 1.98 ಲಕ್ಷ ಮೊತ್ತದ ಬಿಲ್ ಪಾವತಿಯಾಗಬೇಕಿತ್ತು.
ಈ ಬಿಲ್ ಹಣವನ್ನು ಮಂಜೂರು ಮಾಡಲು ಕಚೇರಿಯ ವ್ಯವಸ್ಥಾಪಕ ಅರವಿಂದ್ ಎಂಬಾತ 12 ಸಾವಿರ ಲಂಚ ನೀಡುವಂತೆ ರಾಜಶೇಖರ್ ಎಂಬುವರಿಗೆ ಒತ್ತಾಯಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ರಾಜಶೇಖರ್ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ದಾಳಿ : ದೂರಿನ ಅನ್ವಯ ಇಂದು (ಬುಧವಾರ) ಸಂಜೆ ಡಿಎಚ್‌ಒ ಕಚೇರಿಯ ಆವರಣದಲ್ಲೇ ರಾಜಶೇಖರ್ ಅವರಿಂದ ಲಂಚದ ಹಣವನ್ನು ಪಡೆಯುತ್ತಿದ್ದಾಗ ಪ್ಲಾನ್ ಮಾಡಿದ ಲೋಕಾಯುಕ್ತ ಪೊಲೀಸರು ಅರವಿಂದ್ ಅವರನ್ನು ಕೆಂಪುಹಸ್ತವಾಗಿ ಹಿಡಿದಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ. ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿಗಳಾದ ಕೆ.ಎಂ. ಸಂತೋಷ್ ಮತ್ತು ಎಂ. ಮಂಜುನಾಥ್ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಇನ್‌ಸ್ಪೆಕ್ಟರ್‌ಗಳಾದ ಟಿ. ರಾಜು ಮತ್ತು ಬಿ. ಮೊಹಮ್ಮದ್ ಸಲೀಂ ಈ ತಂಡದಲ್ಲಿದ್ದರು ಎನ್ನಲಾಗಿದೆ.