LOCAL NEWS : ಸಿದ್ನೆಕೊಪ್ಪ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಬಂದ್ ಮಾಡುವಂತೆ ಮಹಿಳೆಯರ ಒತ್ತಾಯ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ, ಮೇ 07 : ತಾಲೂಕಿನ ಸಿದ್ನೆಕೊಪ್ಪ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ವಿದ್ಯಾರ್ಥಿಗಳು ಸಹ ಸಾರಾಯಿ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆಯು ಕಣ್ಣಿದ್ದು ಕುರಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕಿ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮುರುಳಿದರ್ ರಾವ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಿದ್ನೆಕೊಪ್ಪ ಗ್ರಾಮದ ಮಹಿಳೆಯರಾದ ಸಿದ್ದಮ್ಮ , ವಿಶಾಲಾಕ್ಷಿ ಮಾತನಾಡಿ,
ನಮ್ಮ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವುದರಿಂದ ಸಾರಾಯಿ ಅನೇಕ ಕುಟುಂಬಗಳನ್ನು ಬೀದಿಗೆ ತರುತ್ತಿದೆ. ಮನೆಯಲ್ಲಿ ಕುಡಿದು ಬಂದ ಪುರುಷರು ಕೊಡುವ ಹಿಂಸೆಗೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಣ್ಣೀರು ಹಾಕುವ ಪ್ರಸಂಗಗಳು ನಡೆಯುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಚಿಕ್ಕ-ಚಿಕ್ಕ ವಿದ್ಯಾರ್ಥಿಗಳು ಈ ಹೆಂಡದ ಚಟಕ್ಕೆ ದಾಸರಾಗುತ್ತಿರುವ ವಿದ್ಯಾಮಾನ ನಡೆಯುತ್ತಿರುವುದು ದುದೈರ್ವದ ಸಂಗತಿಯಾಗಿದೆ. ನಮ್ಮ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಇಂದಿನಿಂದಲೇ ಅಕ್ರಮ ಸಾರಾಯಿ ಮಾರಾಟ ನಿಲ್ಲಬೇಕು. ಅಕ್ರಮ ಸರಾಯಿ ಮಾರಾಟಗಾರರನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುವರ್ಣ, ಸಿದ್ದಮ್ಮ , ಚೆನ್ನಮ್ಮ, ಅಂದಮ್ಮ, ಲಕ್ಷ್ಮಮ್ಮ, ದೇವಕ್ಕ ಇತರರು ಇದ್ದರು.
‘ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಚಿಕ್ಕೇನೆಕೊಪ್ಪ ಗ್ರಾಮಗಳಲ್ಲಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಿದ್ನೆಕೊಪ್ಪ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು, ಮಹಿಳೆಯರು ಕಣ್ಣೀರು ಹಾಕಿಕೊಂಡು ಸಾರಾಯಿ ಬಂದ್ ಮಾಡುವಂತೆ ಕಚೇರಿಗಳಿಗೆ ಮನವಿ ಸಲ್ಲಿಸಲು ಅಲಿಯುತ್ತಿರುವುದು ನೋವಿನ ಸಂಗತಿ”
ಅಂದಪ್ಪ ಕೋಳೂರು, ರಾಜ್ಯ ಉಪಾಧ್ಯಕ್ಷ.
ಕರ್ನಾಟಕ ರಾಜ್ಯ ರೈತ ಸಂಘ.