You are currently viewing SPECIAL STORY : ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ “ಕಾಕ್ರೋಚ್ ಜನತಾ ಪಾರ್ಟಿ”ಯ ಪಂಚಸೂತ್ರ ಕಾರ್ಯಸೂಚಿ!

SPECIAL STORY : ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ “ಕಾಕ್ರೋಚ್ ಜನತಾ ಪಾರ್ಟಿ”ಯ ಪಂಚಸೂತ್ರ ಕಾರ್ಯಸೂಚಿ!

SPECIAL STORY : ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ “ಕಾಕ್ರೋಚ್ ಜನತಾ ಪಾರ್ಟಿ”ಯ ಪಂಚಸೂತ್ರ ಕಾರ್ಯಸೂಚಿ!

ವಿಶೇಷ ವರದಿ :  ಚಂದ್ರು ಆರ್‌ ಭಾನಾಪೂರ್‌

PV  ನ್ಯೂಸ್‌ ಡಿಜಿಟಲ್‌ ​: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ತನ್ನ ಅಧಿಕೃತ “ಐದು ಅಂಶಗಳ ಕಾರ್ಯಸೂಚಿ”ಯನ್ನು (Five-Point Agenda) ಬಿಡುಗಡೆ ಮಾಡಿದೆ. ಪ್ರಸ್ತುತ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿರುವ ಈ ಪಂಚಸೂತ್ರ ಪ್ರಣಾಳಿಕೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪಾರ್ಟಿ ಬಿಡುಗಡೆ ಮಾಡಿರುವ ಆ ಐದು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

​1. ನ್ಯಾಯಾಧೀಶರಿಗೆ ನಿವೃತ್ತಿ ನಂತರದ ಬಹುಮಾನಗಳಿಲ್ಲ : ​ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ (Chief Justice) ಅವರ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನ ಸೇರಿದಂತೆ ಯಾವುದೇ ರೀತಿಯ ನಿವೃತ್ತಿ ನಂತರದ ಬಹುಮಾನ ಅಥವಾ ಹುದ್ದೆಗಳನ್ನು ನೀಡಬಾರದು ಎಂದು ಪಕ್ಷ ಪ್ರತಿಪಾದಿಸಿದೆ. ನ್ಯಾಯಾಂಗದ ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳಲು ಈ ನಿರ್ಧಾರ ಅಗತ್ಯ ಎಂದು ತಿಳಿಸಿದೆ.

​2. ಪ್ರತಿ ಕಾನೂನುಬದ್ಧ ಮತದ ರಕ್ಷಣೆ : ​ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಭಯೋತ್ಪಾದನೆಗೆ ಸಮಾನ ಎಂದು ಪರಿಗಣಿಸಿರುವ ಪಕ್ಷ, ಸಿಜೆಪಿ ಅಥವಾ ಯಾವುದೇ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಯಾವುದೇ ಕಾನೂನುಬದ್ಧ ಮತದಾರನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿದರೆ, ಅದಕ್ಕೆ ಮುಖ್ಯ ಚುನಾವಣಾ ಆಯುಕ್ತರನ್ನೇ (CEC) ಹೊಣೆಗಾರರನ್ನಾಗಿ ಮಾಡಿ ಅವರನ್ನು ಯುಎಪಿಎ (UAPA) ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದೆ.

​3. ಮಹಿಳೆಯರಿಗೆ ಶೇ. ೫೦ ರಷ್ಟು ಮೀಸಲಾತಿ : ​ಸಂಸತ್ತಿನ ಒಟ್ಟು ಸಂಖ್ಯಾಬಲವನ್ನು ಹೆಚ್ಚಿಸದೆಯೇ ಮಹಿಳೆಯರಿಗೆ ಪ್ರಸ್ತುತ ಚರ್ಚೆಯಲ್ಲಿರುವ ಶೇ. ೩೩ ರ ಬದಲಾಗಿ ನೇರವಾಗಿ ಶೇ. ೫೦ ರಷ್ಟು ಸೀಟುಗಳನ್ನು ಮೀಸಲಿಡಬೇಕು. ಅಷ್ಟೇ ಅಲ್ಲದೆ, ಸರ್ಕಾರದ ಎಲ್ಲಾ ಸಂಪುಟ ದರ್ಜೆಯ (Cabinet) ಹುದ್ದೆಗಳಲ್ಲೂ ಶೇ. ೫೦ ರಷ್ಟನ್ನು ಮಹಿಳೆಯರಿಗೇ ಮೀಸಲಿಡಬೇಕು ಎಂಬ ಕ್ರಾಂತಿಕಾರಿ ಪ್ರಸ್ತಾಪವನ್ನು ಮುಂದಿಟ್ಟಿದೆ.

4 . ಸ್ವತಂತ್ರ ಮಾಧ್ಯಮಕ್ಕೆ ಆದ್ಯತೆ – ‘ಗೋದಿ ಮೀಡಿಯಾ’ಕ್ಕೆ ಅಂತ್ಯ : ದೇಶದ ಪ್ರಮುಖ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಮಾಲೀಕತ್ವದ ಎಲ್ಲಾ ಮಾಧ್ಯಮ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸುವ ಮೂಲಕ ನಿಜವಾದ ಸ್ವತಂತ್ರ ಮಾಧ್ಯಮಕ್ಕೆ ದಾರಿ ಮಾಡಿಕೊಡಲಾಗುವುದು. ಜೊತೆಗೆ, ಪಕ್ಷಪಾತ ಧೋರಣೆ ಹೊಂದಿರುವ ‘ಗೋದಿ ಮೀಡಿಯಾ’ದ ಪ್ರಮುಖ ನಿರೂಪಕರ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

​5. ಪಕ್ಷಾಂತರ ಮಾಡುವವರಿಗೆ ೨೦ ವರ್ಷಗಳ ನಿಷೇಧ : ​ರಾಜಕೀಯ ಪಕ್ಷಾಂತರ ಪಿಡುಗಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಿಜೆಪಿ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಯಾವುದೇ ಶಾಸಕ (MLA) ಅಥವಾ ಸಂಸದರನ್ನು (MP) ಮುಂದಿನ ೨೦ ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮತ್ತು ಯಾವುದೇ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸದಂತೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕಠಿಣ ನಿಲುವನ್ನು ತಳೆದಿದೆ.

​         ಈ ಐದು ಅಂಶಗಳು ದೇಶದ ಸದ್ಯದ ರಾಜಕೀಯ, ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆಗೆ ನೇರ ಸವಾಲು ಹಾಕುವಂತಿದ್ದು, ಮುಂಬರುವ ದಿನಗಳಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.

Leave a Reply

error: Content is protected !!