LOCAL NEWS : ಮುಂಗಾರು ಚುರುಕು: ಕುಕನೂರಲ್ಲಿ ಯೂರಿಯಾಕ್ಕಾಗಿ ರೈತರ ಹರಸಾಹಸ!

PV NEWS :
ಕುಕನೂರು, ಜೂನ್ 10 : ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಹರ್ಷಚಿತ್ತರಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಬಿತ್ತನೆಗೆ ಅತ್ಯಗತ್ಯವಾಗಿ ಬೇಕಾದ ಯೂರಿಯಾ ಗೊಬ್ಬರದ ಕೊರತೆ ರೈತರ ಸಂತಸವನ್ನು ಕಿತ್ತುಕೊಂಡಿದೆ.
ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಕೆಪಿಎಸ್) ಹಾಗೂ ಅಧಿಕೃತ ಗೊಬ್ಬರ ಮಾರಾಟ ಮಳಿಗೆಗಳ ಮುಂದೆ ನೂರಾರು ರೈತರು ಮುಂಜಾನೆ 5 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗ ಕಂಡು ಬಂದವು.
ಕೃತಕ ಅಭಾವದ ಶಂಕೆ : ರೈತರ ಆಕ್ರೋಶ

ತಾಲೂಕಿನ ಪ್ರಮುಖ ಕೇಂದ್ರಗಳಾದ ಕುಕನೂರು, ಯಲಬುರ್ಗಾ ರಸ್ತೆ, ಮತ್ತು ಸುತ್ತಮುತ್ತಲಿನ ಗ್ರಾಮಗಳ ಸೊಸೈಟಿಗಳಲ್ಲಿ ಯೂರಿಯಾ ದಾಸ್ತಾನು ಖಾಲಿಯಾಗಿದೆ ಎಂಬ ಬೋರ್ಡ್‌ಗಳು ರಾರಾಜಿಸುತ್ತಿವೆ. ಇದರಿಂದ ಕಂಗಾಲಾದ ರೈತರು ಖಾಸಗಿ ಅಂಗಡಿಗಳ ಮೊರೆ ಹೋಗುತ್ತಿದ್ದು, ಅಲ್ಲಿ ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
“ಮಳೆ ಬಂದಿದೆ ಎಂದು ಸಂತೋಷದಿಂದ ಹೊಲ ಹದಗೊಳಿಸಿ ಬಿತ್ತನೆಗೆ ರೆಡಿಯಾಗಿದ್ದೇವೆ. ಆದರೆ ಮೂರು ದಿನಗಳಿಂದ ಸೊಸೈಟಿ ಅಲೆಯುತ್ತಿದ್ದರೂ ಒಂದು ಚೀಲ ಯೂರಿಯಾ ಸಿಗುತ್ತಿಲ್ಲ. ಕೃಷಿ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸದಿದ್ದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ.”
—ಯಮನೂರು, ಕುಕನೂರು ಭಾಗದ ರೈತ.
“ತಾಲೂಕಿನ ಕುಕನೂರು, ಬಾನಾಪುರ, ಇಟಗಿ, ತಳಕಲ್ ಹಾಗೂ ಮಸಬಹಂಚಿನಾಳ ಸಹಕಾರ ಸಂಘಗಳ ಮೂಲಕ ಯೂರಿಯಾ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಪೂರೈಸಲು ಇಲಾಖೆ ನಿರಂತರ ಕ್ರಮ ಕೈಗೊಂಡಿದೆ. ರೈತರು ಒಮ್ಮೆಗೆ ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಅದನ್ನು ಕೂಡಲೇ ಸರಿಪಡಿಸಲಾಗುವುದು ಈಗಾಗಲೇ ಸುಮಾರು 12,00 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ವಿತರಿಸಲಾಗಿದೆ. ಹೆಚ್ಚುವರಿಯಾಗಿ 1200 ಮೆಟ್ರಿಕ್ ಟನ್ ಯೂರಿಯಾವನ್ನು ತರಿಸಲಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ವಿತರಣೆ ಮಾಡಲಾಗುವುದು”
:- ಪ್ರಮೋದ್ ತುಂಬಳ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಯಲಬುರ್ಗಾ- ಕುಕನೂರ.