LOCAL NEWS : ಕುಕನೂರು | ಕಾಂಗ್ರೆಸ್ ವಿರುದ್ಧ ಕ್ಷೇತ್ರದಲ್ಲಿ ಅಪಪ್ರಚಾರ : ಕಂಬಳಿ, ಕುಡುಗುಂಟಿ ವಿರುದ್ಧ ಬ್ಲಾಕ್ ಕಾಂಗ್ರೆಸ್ ಆರೋಪ..! : ಕಳಕಪ್ಪ ಕಂಬಳಿ ಹೇಳಿದ್ದೇನು?
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಜೂ. 12: ಅವಳಿ ತಾಲೂಕಿನ ಪ್ರಭಾವಿ ರಾಜಕೀಯ ಮುಖಂಡ ಹಾಗೂ ಸಮಾಜ ಸೇವಕ ಕಳಕಪ್ಪ ಕಂಬಳಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಕುಡುಗುಂಟೆ ಅವರ ಇತ್ತೀಚಿನ ರಾಜಕೀಯ ನಡೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡಿದೆ ಎಂದು ಯಲಬುರ್ಗಾ ಹಾಗೂ ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಆರೋಪಿಸಿವೆ.
ಈ ಕುರಿತು ಶುಕ್ರವಾರ ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಹಾಗೂ ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತಗೌಡ ಪಾಟೀಲ ಚಂಡೂರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಕಳಕಪ್ಪ ಕಂಬಳಿ ಹಾಗೂ ಈರಪ್ಪ ಕುಡುಗುಂಟೆ ಭೇಟಿ ಮಾಡಿ ಶುಭ ಕೋರಿರುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಆ ಭೇಟಿಯನ್ನು ರಾಜಕೀಯವಾಗಿ ಬಳಸಿಕೊಂಡು ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕಳಕಪ್ಪ ಕಂಬಳಿ ಹಾಗೂ ಈರಪ್ಪ ಕುಡುಗುಂಟೆ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಬಸವರಾಜ್ ರಾಯರೆಡ್ಡಿ ಅವರಿಂದ ವಿವಿಧ ಹುದ್ದೆಗಳು ಮತ್ತು ಅಧಿಕಾರದ ಅವಕಾಶಗಳನ್ನು ಪಡೆದಿದ್ದರು. ಬಳಿಕ 2020ರಿಂದ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈಯಕ್ತಿಕ ಲಾಭ ಹಾಗೂ ಅಧಿಕಾರದ ಉದ್ದೇಶದಿಂದ ಮತ್ತೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರೊಂದಿಗೆ ಗುರುತಿಸಿಕೊಂಡು ಸ್ಥಳೀಯ ಶಾಸಕ ಹಾಗೂ ಪಕ್ಷದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎಲ್ಲ ಸಮುದಾಯ ಹಾಗೂ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಬಸವರಾಜ್ ರಾಯರೆಡ್ಡಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಇಂತಹ ಅಪಪ್ರಚಾರಗಳಿಗೆ ಮರುಳಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಶಾಸಕ ಬಸವರಾಜ್ ರಾಯರೆಡ್ಡಿ ಅವರೊಂದಿಗೆ ಕೈಜೋಡಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರಜಾವೀಕ್ಷಣೆ ಡಿಜಿಟಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಳಕಪ್ಪ ಕಂಬಳಿ, “ಈ ಕುರಿತು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ, ನಾಳೆ ಅಥವಾ ನಾಡಿದ್ದು ಪತ್ರಿಕಾಗೋಷ್ಠಿಯನ್ನು ಕರೆಯಲಿದ್ದೇನೆ, ಅಲ್ಲಿ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ” ಎಂದು ಹೇಳಿದರು.