ಕೊಪ್ಪಳ, (ಕೊಲ್ಕತ್ತಾ ) ಜೂನ್ 29 : ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಯುವಜನರು ಸಂಘಟಿತ ಚಳುವಳಿ ಕಟ್ಟಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (AIDYO) ಕರೆ ನೀಡಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಎಐಡಿವೈಒ ಸಂಘಟನೆಯ 60ನೇ ವರ್ಷಾಚರಣೆಯ ಸಮಾರೋಪ ಸಮಾರಂಭ, ಅಖಿಲ ಭಾರತ ಮಟ್ಟದ ಯುವಜನ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಮುಖಂಡರು ಈ ಆಶಯ ವ್ಯಕ್ತಪಡಿಸಿದರು.
ಬೃಹತ್ ಯುವಜನ ರ‍್ಯಾಲಿ:
ವರ್ಷಾಚರಣೆಯ ಅಂಗವಾಗಿ ಕೋಲ್ಕತ್ತಾದ ಕಾಲೇಜು ಚೌಕದಿಂದ ರಾಜಾ ಸುಬೋಧ್ ಮಲ್ಲಿಕ್ ಚೌಕದವರೆಗೆ ಬೃಹತ್ ಯುವಜನ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ದೇಶದ ಸುಮಾರು 20 ರಾಜ್ಯಗಳಿಂದ ಆಗಮಿಸಿದ್ದ ಯುವಜನ ಪ್ರತಿನಿಧಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಿ ಯುವ ಚಳುವಳಿಗೆ ಶಕ್ತಿ ತುಂಬಿದರು. ರ‍್ಯಾಲಿಗೂ ಮುನ್ನ ನಡೆದ ಸಭೆಯಲ್ಲಿ ಎಐಡಿವೈಒ ನಾಯಕರಾದ ಸಿದ್ದಲಿಂಗ ಬಾಗೇವಾಡಿ (ಕರ್ನಾಟಕ), ಪ್ರಮೋದ್ ನಾಮದೇವ್ (ಮಧ್ಯಪ್ರದೇಶ) ಹಾಗೂ ಅಂಜನ್ ಮುಖರ್ಜಿ (ಪಶ್ಚಿಮ ಬಂಗಾಳ) ಮಾತನಾಡಿದರು. ಅಖಿಲ ಭಾರತ ಸಮಿತಿ ಕಚೇರಿ ಕಾರ್ಯದರ್ಶಿ ಕಾಮ್ರೇಡ್ ಬಿಜೋಯ್ ಮಲ್ಲಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘಟಿತ ಚಳುವಳಿಗೆ ಕರೆ:
ರಾಜಾ ಸುಬೋಧ್ ಮಲ್ಲಿಕ್ ಚೌಕದಲ್ಲಿ ನಡೆದ ಅಖಿಲ ಭಾರತ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಕೇಂದ್ರ ಸಮಿತಿ ಸದಸ್ಯ ಕಾಮ್ರೇಡ್ ಅರುಣ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಸ್ಟೇಟ್ ಸೆಕ್ರೇಟ್ರಿಯೇಟ್ ಸದಸ್ಯ ಕಾಮ್ರೇಡ್ ಸುಬ್ರತಾ ಗೌರಿ ಮಾತನಾಡಿದರು. ಸಂಘಟನೆಯ 60 ವರ್ಷಗಳ ಸುದೀರ್ಘ ಹೋರಾಟದ ಇತಿಹಾಸವನ್ನು ಸ್ಮರಿಸಿದ ಅವರು, “ದೇಶದಲ್ಲಿ ಸದ್ಯ ಆತಂಕಕಾರಿ ವಾತಾವರಣವಿದೆ. ನಿರುದ್ಯೋಗ, ಉದ್ಯೋಗಗಳ ನಾಶ, ಸರ್ಕಾರದ ಬುಲ್ಡೋಜರ್ ನೀತಿ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಮದ್ಯ ಮತ್ತು ಮಾದಕ ವ್ಯಸನದಂತಹ ಪಿಡುಗುಗಳು ಹೆಚ್ಚುತ್ತಿವೆ. ಇವುಗಳ ವಿರುದ್ಧ ಯುವಜನತೆ ಜಾಗೃತರಾಗಬೇಕು” ಎಂದರು.
ಇದೇ ವೇಳೆ ಮಾತನಾಡಿದ ಎಐಡಿವೈಒ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಅಮರ್‌ಜೀತ್ ಕುಮಾರ್ ಮತ್ತು ಅಖಿಲ ಭಾರತ ಉಪಾಧ್ಯಕ್ಷ ಕಾಮ್ರೇಡ್ ಜಿ. ಶಶಿ ಕುಮಾರ್, “ಚುನಾವಣಾ ಪಟ್ಟಿಯಿಂದ ಮತದಾರರನ್ನು ಕೈಬಿಡುತ್ತಿರುವ ತಂತ್ರಗಾರಿಕೆ ಹಾಗೂ ಆಡಳಿತ ಪಕ್ಷಗಳ ಕೋಮುವಾದಿ ವಿಭಜಕ ನೀತಿಗಳ ವಿರುದ್ಧ ದೇಶಾದ್ಯಂತ ಬಲಿಷ್ಠ ಯುವಜನ ಚಳುವಳಿ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದರು. ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ಕಾಮ್ರೇಡ್ ನಿರಂಜನ್ ನಾಸ್ಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಐತಿಹಾಸಿಕ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 2,000ಕ್ಕೂ ಹೆಚ್ಚು ಯುವಜನ ಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದು ಎಐಡಿವೈಒ ಕೊಪ್ಪಳ ಜಿಲ್ಲಾ ಸಮಿತಿಯ ಮುಖಂಡರಾದ ಶರಣು ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.