BIG NEWS : ರೈತರ ಭೂಸ್ವಾಧೀನ ವಿವಾದ: ಶಾಸಕ ಬಸವರಾಜ ರಾಯರೆಡ್ಡಿಗೆ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ್ರ ಬಹಿರಂಗ ಪತ್ರ!
ವಿಂಡ್ ಮಿಲ್, ಸೋಲಾರ್ ಹಾಗೂ ಪವರ್ ಗ್ರಿಡ್ ಯೋಜನೆಗಳ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪ; ಸರ್ಕಾರದ ಪಾತ್ರದ ಕುರಿತು ಬಹಿರಂಗ ಚರ್ಚೆಗೆ ಸವಾಲು!!
ಯಲಬುರ್ಗಾ, ಜುಲೈ 7 : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿಂಡ್ ಮಿಲ್, ಸೋಲಾರ್ ಪ್ಯಾನಲ್ ಹಾಗೂ ಪವರ್ ಗ್ರಿಡ್ ಯೋಜನೆಗಳಿಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳು ದೌರ್ಜನ್ಯ ಮತ್ತು ಒತ್ತಡದ ಮೂಲಕ ವಶಪಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಿ, ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಹಾಗೂ ಹಿರಿಯ ವಕೀಲ ಮಲ್ಲನಗೌಡ ಎಸ್. ಕೋನನಗೌಡ್ರ ಅವರು ಶಾಸಕ ಬಸವರಾಜ ರಾಯರೆಡ್ಡಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಜುಲೈ 6ರಂದು ಶಾಸಕ ಬಸವರಾಜ ರಾಯರೆಡ್ಡಿ ರೈತರಿಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿರುವ ಅವರು, ಕ್ಷೇತ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಬಹುಪಾಲು ಈಗಾಗಲೇ ಪೂರ್ಣಗೊಂಡಿದ್ದು, ಎಲ್ಲವೂ ಮುಗಿದ ನಂತರ ರೈತರಿಗೆ ಪತ್ರ ಬರೆಯುತ್ತಿರುವುದು ಕೇವಲ ಜನರ ಕಣ್ಣೊರೆಸುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂಬ ಶಾಸಕರ ಹೇಳಿಕೆ ತಪ್ಪು ಮಾಹಿತಿ ನೀಡುವ ಪ್ರಯತ್ನವಾಗಿದ್ದು, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಖಾಸಗಿ ಕಂಪನಿಗಳು ರೈತರ ಮೇಲೆ ಒತ್ತಡ ಹೇರಿ ಭೂಮಿ ವಶಪಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಆಗಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿದ್ದ ಶಾಸಕ ಬಸವರಾಜ ರಾಯರೆಡ್ಡಿ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದರು ಎಂದು ಕೋನನಗೌಡ್ರ ಪ್ರಶ್ನಿಸಿದ್ದಾರೆ. ಆ ಸಂದರ್ಭವನ್ನು ಗಾಂಧೀಜಿಯವರ ಮೂರು ಮಂಗಗಳ ಕಥೆಗೆ ಹೋಲಿಸಿ, ಜನಪ್ರತಿನಿಧಿಗಳು ರೈತರ ಪರ ನಿಲ್ಲಬೇಕಾದ ಸಂದರ್ಭದಲ್ಲಿ ಮೌನವಾಗಿದ್ದರು ಎಂದು ಟೀಕಿಸಿದ್ದಾರೆ.
ಪತ್ರದಲ್ಲಿ ಬಸವಣ್ಣನವರ ವಚನವನ್ನು ಉಲ್ಲೇಖಿಸಿರುವ ಅವರು, ಜನರ ರಕ್ಷಣೆಗೆ ನಿಲ್ಲಬೇಕಾದವರೇ ಶೋಷಕರ ಪರ ನಿಂತರೆ ರೈತರು ನ್ಯಾಯಕ್ಕಾಗಿ ಯಾರನ್ನು ಆಶ್ರಯಿಸಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಕ್ಷೇತ್ರದ ರೈತರು ಹಲವು ದಶಕಗಳಿಂದ ವಿಶ್ವಾಸವಿಟ್ಟು ಶಾಸಕರನ್ನು ಆಯ್ಕೆ ಮಾಡಿದ್ದು, ಅವರ ಋಣ ತೀರಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿದೆ ಎಂದು ಹೇಳಿರುವ ಕೋನನಗೌಡ್ರ, ಖಾಸಗಿ ಕಂಪನಿಗಳು ವಶಪಡಿಸಿಕೊಂಡಿರುವ ಕೃಷಿ ಭೂಮಿಯನ್ನು ರೈತರಿಗೆ ಮರಳಿ ಕೊಡಿಸಲು ಶಾಸಕರು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾತ್ರವೇ ಇಲ್ಲ ಎಂದು ಶಾಸಕರು ಹೇಳುತ್ತಿರುವುದಾದರೆ, ದಿನಾಂಕ ನಿಗದಿಪಡಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಬರಬೇಕು ಎಂದು ಮಲ್ಲನಗೌಡ ಎಸ್. ಕೋನನಗೌಡ್ರ ಅವರು ಸವಾಲು ಹಾಕಿದ್ದಾರೆ.
ಈ ಬಹಿರಂಗ ಪತ್ರವು ಯಲಬುರ್ಗಾ ಕ್ಷೇತ್ರದಲ್ಲಿ ರೈತರ ಭೂಸ್ವಾಧೀನ ವಿಚಾರಕ್ಕೆ ಹೊಸ ರಾಜಕೀಯ ತಿರುವು ನೀಡಿದ್ದು, ಈ ಕುರಿತು ಶಾಸಕ ಬಸವರಾಜ ರಾಯರೆಡ್ಡಿ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.