KOPPAL NEWS : ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ಕೊಪ್ಪಳ ಪೊಲೀಸರ ಡಿಜಿಟಲ್ ಅಸ್ತ್ರ! : ಸಾರ್ವಜನಿಕರ ಸಹಕಾರಕ್ಕೆ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಮನವಿ!
ಅನಾಮಧೇಯ ಮಾಹಿತಿ ನೀಡಲು ಕ್ಯೂಆರ್ ಕೋಡ್ ಬಿಡುಗಡೆ – ಸಾರ್ವಜನಿಕರ ಸಹಕಾರಕ್ಕೆ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಮನವಿ!
PV NEWS ಕನ್ನಡ 24×7 :
ಕೊಪ್ಪಳ, ಜು 13 :“ಡ್ರಗ್ಸ್ ಫ್ರೀ ಕರ್ನಾಟಕ – ಡ್ರಗ್ಸ್ ಫ್ರೀ ಕೊಪ್ಪಳ” ಎಂಬ ಮಹತ್ವಾಕಾಂಕ್ಷಿ ಅಭಿಯಾನದಡಿ ಕೊಪ್ಪಳ ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಜಿಲ್ಲಾ ಪೊಲೀಸ್ ಇಲಾಖೆ ಹೊಸ ಹಾಗೂ ವಿನೂತನ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ನಡೆಯುವ ಮಾದಕ ದ್ರವ್ಯ ಜಾಲ ಹಾಗೂ ಇತರ ಅಕ್ರಮ ಚಟುವಟಿಕೆಗಳ ಕುರಿತು ಸಾರ್ವಜನಿಕರು ಸುರಕ್ಷಿತವಾಗಿ ಮತ್ತು ಅನಾಮಧೇಯವಾಗಿ ಮಾಹಿತಿ ನೀಡಲು ವಿಶೇಷ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ರಾಮ್ ಎಲ್. ಅರಸಿದ್ದಿ ತಿಳಿಸಿದ್ದಾರೆ.
ಜಿಲ್ಲೆಯ ಯುವ ಸಮುದಾಯವನ್ನು ಮಾದಕ ದ್ರವ್ಯ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಎಲ್ಲಾ ಶಾಲೆಗಳು, ಕಾಲೇಜುಗಳು, ರೆಸಾರ್ಟ್‌ಗಳು ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಹೊಂದಿರುವ ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಸಾರ್ವಜನಿಕರು ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾದಕ ದ್ರವ್ಯ ಸೇವನೆ, ಮಾರಾಟ, ಸಾಗಾಟ ಅಥವಾ ಇತರೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತಮ್ಮ ಬಳಿ ಇರುವ ಮಾಹಿತಿಯನ್ನು ಸುಲಭವಾಗಿ ದಾಖಲಿಸಬಹುದಾಗಿದೆ.
ಪೊಲೀಸ್ ಇಲಾಖೆ ಮಾಹಿತಿ ನೀಡುವವರ ಹೆಸರು, ವಿಳಾಸ ಅಥವಾ ಯಾವುದೇ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. ಸಂಪೂರ್ಣ ಅನಾಮಧೇಯ (Anonymous) ವ್ಯವಸ್ಥೆಯ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಮಾಹಿತಿ ನೀಡುವವರ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುತ್ತದೆ.
ಸಾರ್ವಜನಿಕರು ಕಳುಹಿಸುವ ಮಾಹಿತಿ ನೇರವಾಗಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಲಿದ್ದು, ಅಲ್ಲಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಡ್ರಗ್ಸ್ ಸಂಬಂಧಿತ ಪ್ರಕರಣಗಳಷ್ಟೇ ಅಲ್ಲದೆ, ಇತರ ಅಕ್ರಮ ಚಟುವಟಿಕೆಗಳ ಕುರಿತ ಮಾಹಿತಿಯನ್ನೂ ಇದೇ ವ್ಯವಸ್ಥೆಯ ಮೂಲಕ ನೀಡಬಹುದಾಗಿದೆ.
ಕೊಪ್ಪಳ ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಅಭಿಯಾನ ಯಶಸ್ವಿಯಾಗಲು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು, ಯುವಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
“ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ನಿಮ್ಮ ಸುತ್ತಮುತ್ತ ಮಾದಕ ದ್ರವ್ಯ ಅಥವಾ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಹಿಂಜರಿಯದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ನೀಡಿ. ಮಾಹಿತಿ ನೀಡುವವರ ಗುರುತು ಸಂಪೂರ್ಣ ಗೌಪ್ಯವಾಗಿರುತ್ತದೆ. ಸಾರ್ವಜನಿಕರ ಸಹಕಾರವೇ ಈ ಅಭಿಯಾನದ ಯಶಸ್ಸಿನ ಮೂಲಾಧಾರ.”
— ಡಾ. ರಾಮ್ ಎಲ್. ಅರಸಿದ್ದಿ, ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ), ಕೊಪ್ಪಳ