KOPPAL NEWS | ಯಲಬುರ್ಗಾ-ಕುಕನೂರಿನಲ್ಲಿ ರೈತರ ಕೃಷಿ ಭೂಮಿ ಕಬಳಿಸಲು ದಲ್ಲಾಳಿಗಳ ಹುನ್ನಾರ – ರೈತ ಸಂಘದ ತೀವ್ರ ಆಕ್ರೋಶ!!
PV NEWS ಕನ್ನಡ 24×7 | ಚಂದ್ರು ಆರ್. ಭಾನಾಪುರ, ಕೊಪ್ಪಳ
ಕೊಪ್ಪಳ, ಜು 14 :ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ದಲ್ಲಾಳಿಗಳ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ್ ಚಿಲವಾಡಗಿ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ ನಗರದ ಮೀಡಿಯಾ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಯಾವುದೇ ಕಾರಣಕ್ಕೂ ದಲ್ಲಾಳಿಗಳ ಮಾತಿಗೆ ಮರುಳಾಗಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು. ಕೃಷಿ ಭೂಮಿಯನ್ನು ಕಬಳಿಸುವ ಪ್ರಯತ್ನಗಳ ವಿರುದ್ಧ ರೈತ ಸಂಘ ಉಗ್ರ ಹೋರಾಟ ನಡೆಸಲು ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಎಸ್.ಆರ್. ನವಲಿ ಹಿರೇಮಠ್ ಎಂಬ ವ್ಯಕ್ತಿ ಎಲಬುರ್ಗಾ ಭಾಗದಲ್ಲಿ ರೈತರ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಖಾಸಗಿ ಕಂಪನಿಯೊಂದಕ್ಕೆ ಹಸ್ತಾಂತರಿಸುವ ದಲ್ಲಾಳಿತನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಸುಮಾರು 200 ಎಕರೆ ಕೃಷಿ ಭೂಮಿಯನ್ನು ಈ ರೀತಿಯಾಗಿ ಖರೀದಿಸುವ ಸಂಚು ನಡೆಯುತ್ತಿದೆ ಎಂದು ತಿಳಿಸಿದರು.
ಜಮೀನು ಬೆಲೆಯಲ್ಲಿಯೂ ಭಾರಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಬಿಡದಿ ಭಾಗದಲ್ಲಿ ಸರ್ಕಾರವೇ ಭೂಸ್ವಾಧೀನಕ್ಕೆ ಪ್ರತಿ ಎಕರೆಗೆ ಸುಮಾರು ₹2.30 ಕೋಟಿ ಪರಿಹಾರ ನೀಡುತ್ತಿರುವ ಸಂದರ್ಭದಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಎಲಬುರ್ಗಾದಲ್ಲಿ ಕೇವಲ ₹11 ಲಕ್ಷದಿಂದ ₹12.50 ಲಕ್ಷದವರೆಗೆ ಅಲ್ಪ ಮೊತ್ತ ನೀಡಿ ರೈತರನ್ನು ವಂಚಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಕೆಲವು ದಲ್ಲಾಳಿಗಳು, “ನಾನು ಎಸಿ, ತಹಶೀಲ್ದಾರ್, ಶಿರಸ್ತೆದಾರ್ ಹಾಗೂ ತಲಾಟಿಗಳನ್ನು ಕರೆಸಿ ಜಮೀನು ಖರೀದಿ ಪ್ರಕ್ರಿಯೆ ಮಾಡಿಸುತ್ತೇನೆ” ಎಂದು ರೈತರಿಗೆ ಬೆದರಿಕೆ ಹಾಕುತ್ತಿರುವುದು ಅತ್ಯಂತ ಖಂಡನೀಯ. “ಇವರು ಸರ್ಕಾರವೇ? ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ರೈತರ ಮೇಲೆ ಒತ್ತಡ ಹೇರುವುದು ಸಹಿಸಲಾಗುವುದಿಲ್ಲ” ಎಂದು ಬಸವರಾಜ್ ಚಿಲವಾಡಗಿ ಆಕ್ರೋಶ ವ್ಯಕ್ತಪಡಿಸಿದರು.
ದಲಾಳಿಗಳ ಮೂಲಕ ರೈತರ ಜಮೀನು ಖರೀದಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಒಂದು ವೇಳೆ ಈ ಚಟುವಟಿಕೆ ಮುಂದುವರಿದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂತಿಮವಾಗಿ, ರೈತರು ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಸಂರಕ್ಷಿಸಿಕೊಳ್ಳಬೇಕು. ಭೂಮಿ ರೈತರ ಬದುಕಿನ ಆಧಾರವಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ ಎಂದು ಅವರು ಮನವಿ ಮಾಡಿದರು.