You are currently viewing PV NEWS EXCLUSIVE | “₹7.28 ಕೋಟಿ ವೆಚ್ಚ… ‘STORAGE’ನಲ್ಲಿ ‘G’ ಕಾಣೆ, ರೈತರಿಗೆ ಸೇವೆಯೂ ಕಾಣೆ! ಕುಕನೂರಿನ ಶೀತಲಗೃಹದ ಅಸಲಿ ಕಥೆ”

PV NEWS EXCLUSIVE | “₹7.28 ಕೋಟಿ ವೆಚ್ಚ… ‘STORAGE’ನಲ್ಲಿ ‘G’ ಕಾಣೆ, ರೈತರಿಗೆ ಸೇವೆಯೂ ಕಾಣೆ! ಕುಕನೂರಿನ ಶೀತಲಗೃಹದ ಅಸಲಿ ಕಥೆ”

PV NEWS EXCLUSIVE | “₹7.28 ಕೋಟಿ ವೆಚ್ಚ… ‘STORAGE’ನಲ್ಲಿ ‘G’ ಕಾಣೆ, ರೈತರಿಗೆ ಸೇವೆಯೂ ಕಾಣೆ! ಕುಕನೂರಿನ ಶೀತಲಗೃಹದ ಅಸಲಿ ಕಥೆ”

ವಿಶೇಷ ವರದಿ: ಚಂದ್ರು ಆರ್. ಭಾನಾಪುರ

PV NEWS ಕನ್ನಡ 24×7 : 

ಕುಕನೂರು, ಜು. 14: ರೈತರ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮತ್ತು ಸುರಕ್ಷಿತ ಸಂಗ್ರಹಣೆಯ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ₹7.28 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಶೀತಲಗೃಹ (Cold Storage) ಉದ್ಘಾಟನೆಯಾಗಿ ಎರಡುವರೆ ತಿಂಗಳು ಕಳೆದರೂ ಇನ್ನೂ ರೈತರ ಸೇವೆಗೆ ಲಭ್ಯವಾಗಿಲ್ಲ.

ಸಾರ್ವಜನಿಕ ಹಣದಲ್ಲಿ ನಿರ್ಮಾಣವಾದ ಈ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಾರಂಭ ಮಾಡದೇ ನಿಷ್ಕ್ರಿಯವಾಗಿರುವುದು ಆಡಳಿತಾತ್ಮಕ ನಿರ್ಲಕ್ಷ್ಯದ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.

ಸ್ಥಳ ಪರಿಶೀಲನೆ ವೇಳೆ ಕಂಡುಬಂದ ದೃಶ್ಯಗಳು ಯೋಜನೆಯ ನಿರ್ವಹಣಾ ಗುಣಮಟ್ಟದ ಮೇಲೂ ಅನುಮಾನ ಹುಟ್ಟುಹಾಕಿವೆ. ಕಟ್ಟಡದ ಮುಂಭಾಗದಲ್ಲಿರುವ “COLD STORAGE” ಎಂಬ ಫಲಕದಲ್ಲೇ “G” ಅಕ್ಷರ ಕಳಚಿ ಬಿದ್ದಿದ್ದು, “COLD STORA E” ಎಂದು ಕಾಣಿಸುತ್ತಿದೆ.

ಉದ್ಘಾಟನೆಯಾದ ಕೆಲವೇ ವಾರಗಳಲ್ಲಿ ಈ ರೀತಿಯ ಸ್ಥಿತಿ ನಿರ್ಮಾಣವಾಗಿರುವುದು ಕಟ್ಟಡದ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಆದರೆ, ಇದು ಕೇವಲ ಫಲಕದ ಅಕ್ಷರದ ವಿಚಾರವಲ್ಲ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶೀತಲಗೃಹವೇ ರೈತರ ಬಳಕೆಗೆ ತೆರೆಯದಿರುವುದು ಇನ್ನೂ ಗಂಭೀರ ಸಂಗತಿ. ರೈತರಿಗೆ ಅನುಕೂಲವಾಗಬೇಕಿದ್ದ ಯೋಜನೆ ಈಗ ಬೀಗ ಹಾಕಿದ ಕಟ್ಟಡವಾಗಿ ಉಳಿದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರೈತರ ಕನಸು ಇನ್ನೂ ನನಸಾಗಿಲ್ಲ…!!

ಟೊಮ್ಯಾಟೊ, ಮೆಣಸಿನಕಾಯಿ, ಈರುಳ್ಳಿ, ಹಣ್ಣು-ತರಕಾರಿ ಸೇರಿದಂತೆ ಶೀಘ್ರ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಈ ಶೀತಲಗೃಹ ನಿರ್ಮಿಸಲಾಗಿತ್ತು. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಕೆಲವು ದಿನಗಳ ಕಾಲ ಸಂಗ್ರಹಿಸಿ ಉತ್ತಮ ಬೆಲೆ ಸಿಗುವವರೆಗೆ ಕಾಯಲು ಈ ಸೌಲಭ್ಯ ನೆರವಾಗಬೇಕಿತ್ತು.

ಆದರೆ ಶೀತಲಗೃಹ ಕಾರ್ಯಾರಂಭವಾಗದ ಕಾರಣ ರೈತರು ಈಗಲೂ ತುರ್ತು ಮಾರಾಟಕ್ಕೆ ಮೊರೆ ಹೋಗುವ ಪರಿಸ್ಥಿತಿ ಮುಂದುವರಿದಿದ್ದು, ಬೆಲೆ ಕುಸಿತದ ಹೊರೆ ನೇರವಾಗಿ ರೈತರ ಮೇಲೆಯೇ ಬೀಳುತ್ತಿದೆ.

₹7.28 ಕೋಟಿ ವೆಚ್ಚ… ಆದರೆ ಸೇವೆ ಶೂನ್ಯ..!

2023-24ನೇ ಸಾಲಿನ ನಬಾರ್ಡ್ (RIDF) ಯೋಜನೆಯಡಿ ₹7.28 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಶೀತಲಗೃಹವು 2,200 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಟ್ಟು 8 ಕೋಲ್ಡ್ ರೂಮ್‌ಗಳು ನಿರ್ಮಿಸಲಾಗಿದ್ದು, ಪ್ರತಿಯೊಂದು 275 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಆದರೆ, ಎಪಿಎಂಸಿ ಮೂಲಗಳ ಪ್ರಕಾರ ಕೇಂದ್ರ ಕಚೇರಿಯಿಂದ ಅಗತ್ಯ ಮಾರ್ಗಸೂಚಿ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ನಿರ್ದೇಶನಗಳು ಇನ್ನೂ ಬಂದಿಲ್ಲ ಎಂಬ ಕಾರಣದಿಂದ ಶೀತಲಗೃಹವನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗಿಲ್ಲ ಎಂದು ತಿಳಿದುಬಂದಿದೆ.

ಒಂದು ಕಡೆ ಸರ್ಕಾರ ರೈತರ ಅನುಕೂಲಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯ ನಿರ್ಮಿಸಿದರೆ, ಮತ್ತೊಂದೆಡೆ ಆಡಳಿತಾತ್ಮಕ ವಿಳಂಬದಿಂದ ಆ ಸೌಲಭ್ಯ ಬಳಕೆಯಾಗದೇ ಉಳಿದಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.

ಜವಾಬ್ದಾರಿ ಯಾರದು..?

ಯೋಜನೆ ಪೂರ್ಣಗೊಂಡು ಉದ್ಘಾಟನೆಯಾದ ಬಳಿಕವೂ ಕಾರ್ಯಾರಂಭವಾಗದಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ? ಕಾರ್ಯಾಚರಣೆಗೆ ಅಗತ್ಯ ಅನುಮೋದನೆ, ಸಿಬ್ಬಂದಿ ನಿಯೋಜನೆ ಹಾಗೂ ಮಾರ್ಗಸೂಚಿಗಳನ್ನು ಸಮಯಕ್ಕೆ ನೀಡದಿರುವುದಕ್ಕೆ ಯಾವ ಇಲಾಖೆ ಹೊಣೆ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತಿವೆ.

ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಯೋಜನೆಗಳು ಸಮಯಕ್ಕೆ ಜನರಿಗೆ ಉಪಯೋಗವಾಗದಿದ್ದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳು ನಿರ್ವಹಿಸಬೇಕೆಂಬ ಅಭಿಪ್ರಾಯ ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಉತ್ತರಿಸಬೇಕಾದ ಪ್ರಶ್ನೆಗಳು…?

1) ಉದ್ಘಾಟನೆಯಾಗಿ ಎರಡುವರೆ ತಿಂಗಳಾದರೂ ಶೀತಲಗೃಹ ಕಾರ್ಯಾರಂಭವಾಗದಿರುವುದಕ್ಕೆ ನಿಖರ ಕಾರಣವೇನು?

2) ಕೇಂದ್ರ ಕಚೇರಿಯಿಂದ ಮಾರ್ಗಸೂಚಿ ಬಾರದಿದ್ದರೆ ಉದ್ಘಾಟನೆಗೆ ಆತುರ ಏಕೆ?

3) ಕಟ್ಟಡ ಪೂರ್ಣಗೊಂಡ ಬಳಿಕ ನಿರ್ವಹಣೆಯ ಮೇಲ್ವಿಚಾರಣೆ ಯಾರ ಜವಾಬ್ದಾರಿ?

4) ಫಲಕದಲ್ಲೇ ಅಕ್ಷರ ಕಳಚಿ ಬೀಳುವಷ್ಟು ನಿರ್ಲಕ್ಷ್ಯ ಏಕೆ?

5) ರೈತರಿಗೆ ಸೌಲಭ್ಯ ಯಾವ ದಿನದಿಂದ ಲಭ್ಯವಾಗಲಿದೆ ಎಂಬ ಬಗ್ಗೆ ಸರ್ಕಾರದ ಸ್ಪಷ್ಟ ವೇಳಾಪಟ್ಟಿ ಇದೆಯೇ?

ಈ ಕುರಿತು ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಅಧಿಕೃತ ಸ್ಪಷ್ಟನೆ ನೀಡುವುದು ಅಗತ್ಯವಾಗಿದೆ. ಜೊತೆಗೆ ಶೀತಲಗೃಹವನ್ನು ಶೀಘ್ರದಲ್ಲೇ ಕಾರ್ಯಾರಂಭಗೊಳಿಸಿ ರೈತರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

PV NEWS ಕನ್ನಡ 24×7 ಪ್ರಶ್ನಿಸುತ್ತದೆ…!

“₹7.28 ಕೋಟಿ ವೆಚ್ಚದ ಯೋಜನೆ ಉದ್ಘಾಟನೆಯಾಗಿ ತಿಂಗಳುಗಳು ಕಳೆದರೂ ರೈತರಿಗೆ ಪ್ರಯೋಜನವಾಗದಿದ್ದರೆ, ಇದು ಆಡಳಿತಾತ್ಮಕ ನಿರ್ಲಕ್ಷ್ಯವೇ? ಅಥವಾ ಯೋಜನೆಗಳು ಕೇವಲ ಉದ್ಘಾಟನಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿವೆಯೇ?”

Prajavikshane

Chandru R Bhanapaur

Leave a Reply

error: Content is protected !!