You are currently viewing SPECIAL STORY : ಕುಕನೂರಿನ ಬಹುದಿನಗಳ ಕನಸಿಗೆ ಕಾಮಗಾರಿಯ ರೂಪ: ಪ್ರಜಾಸೌಧ ನಿರ್ಮಾಣ ಚುರುಕು : 18 ತಿಂಗಳಲ್ಲಿ ಸಿದ್ಧವಾಗಲಿದೆ ಪ್ರಜಾಸೌಧ! 

SPECIAL STORY : ಕುಕನೂರಿನ ಬಹುದಿನಗಳ ಕನಸಿಗೆ ಕಾಮಗಾರಿಯ ರೂಪ: ಪ್ರಜಾಸೌಧ ನಿರ್ಮಾಣ ಚುರುಕು : 18 ತಿಂಗಳಲ್ಲಿ ಸಿದ್ಧವಾಗಲಿದೆ ಪ್ರಜಾಸೌಧ! 

SPECIAL STORY : ಕುಕನೂರಿನ ಬಹುದಿನಗಳ ಕನಸಿಗೆ ಕಾಮಗಾರಿಯ ರೂಪ: ಪ್ರಜಾಸೌಧ ನಿರ್ಮಾಣ ಚುರುಕು : 18 ತಿಂಗಳಲ್ಲಿ ಸಿದ್ಧವಾಗಲಿದೆ ಪ್ರಜಾಸೌಧ! 

PV NEWS ಕನ್ನಡ 24×7 : ವಿಶೇಷ ವರದಿ : ಚಂದ್ರು ಆರ್. ಭಾನಾಪುರ್. 

ವೇಗ ಪಡೆದ ಪ್ರಜಾಸೌಧ ನಿರ್ಮಾಣ ಕಾಮಗಾರಿ : ಒಂದೇ ತಿಂಗಳಲ್ಲಿ ಭೂ ಸಮತಟ್ಟು, ಅಡಿಪಾಯ ಕಾಮಗಾರಿ ಪೂರ್ಣ; 18 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸುವ ಗುರಿ..!

ಕುಕನೂರು, ಆ. 19: ತಾಲೂಕಿನ ಬಹುನಿರೀಕ್ಷಿತ ತಾಲೂಕು ಆಡಳಿತಾತ್ಮಕ ಕಟ್ಟಡ ‘ಪ್ರಜಾಸೌಧ’ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು, ಕಾಮಗಾರಿ ಸ್ಥಳದಲ್ಲಿ ಅಡಿಪಾಯ ಹಾಗೂ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಕುಕನೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರಜಾಸೌಧದ ಅಡಿಪಾಯ ಹಾಗೂ ಪಿಲ್ಲರ್‌ಗಳ ಕಾಮಗಾರಿ.

 

ಕುಕನೂರು ಪಟ್ಟಣದ 19ನೇ ವಾರ್ಡ್ ವ್ಯಾಪ್ತಿಯ ಗುದ್ನಪ್ಪನ ಮಠದ ಸರ್ವೇ ನಂ. 78ರ ಸುಮಾರು 16 ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಭೂ ಸಮತಟ್ಟು ಕಾರ್ಯ ಕೈಗೊಳ್ಳಲಾಗಿದೆ. ಸುಮಾರು ₹18.60 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಆರಂಭಗೊಂಡು ಒಂದು ತಿಂಗಳಲ್ಲೇ ಕಟ್ಟಡದ ವಿವಿಧ ಭಾಗಗಳಿಗೆ ಅಡಿಪಾಯ ನಿರ್ಮಿಸಿ, ಬೇಸ್ಮೆಂಟ್ ಪಿಲ್ಲರ್‌ಗಳಿಗಾಗಿ ಕಬ್ಬಿಣದ ಸರಳುಗಳ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ.

ಕಾಮಗಾರಿ ಸ್ಥಳದಲ್ಲಿ ವಿವಿಧೆಡೆ ಅಡಿಪಾಯಕ್ಕಾಗಿ ಗುಂಡಿಗಳನ್ನು ತೆಗೆಯಲಾಗಿದ್ದು, ಪಿಲ್ಲರ್‌ಗಳ ನಿರ್ಮಾಣಕ್ಕೆ ಉಕ್ಕಿನ ಸರಳುಗಳನ್ನು ಜೋಡಿಸಲಾಗಿದೆ. ನಿರ್ಮಾಣ ಸಾಮಗ್ರಿಗಳನ್ನು ಸ್ಥಳದಲ್ಲಿ ಸಂಗ್ರಹಿಸಲಾಗಿದ್ದು, ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಕಾಮಗಾರಿ ವೇಗವಾಗಿ ಸಾಗುತ್ತಿರುವುದು ಸ್ಥಳದಲ್ಲಿನ ಚಿತ್ರಗಳಿಂದಲೂ ಸ್ಪಷ್ಟವಾಗುತ್ತದೆ.

ಒಂದೇ ಸ್ಥಳದಲ್ಲಿ ಹಲವು ಸರ್ಕಾರಿ ಕಚೇರಿಗಳು

ಪ್ರಜಾಸೌಧ ನಿರ್ಮಾಣ ಪೂರ್ಣಗೊಂಡ ಬಳಿಕ ತಾಲೂಕು ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ಒಂದೇ ಸಂಕೀರ್ಣದಡಿ ತರಲು ಉದ್ದೇಶಿಸಲಾಗಿದೆ. ಇದರಿಂದ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗುವ ನಿರೀಕ್ಷೆಯಿದೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ವೇ ನಂ. 78ರ ಪ್ರದೇಶದಲ್ಲಿ ಹಲವು ಪ್ರಮುಖ ಸರ್ಕಾರಿ ಕಟ್ಟಡಗಳ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿರುವ ಮಾಹಿತಿಯೂ ಲಭ್ಯವಾಗಿದೆ.

₹95 ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ

ಪ್ರಜಾಸೌಧದ ಜತೆಗೆ ಕುಕನೂರಿನಲ್ಲಿ ವಿವಿಧ ಪ್ರಮುಖ ಸರ್ಕಾರಿ ಮೂಲಸೌಕರ್ಯ ಯೋಜನೆಗಳಿಗೂ ಅನುಮೋದನೆ ಹಾಗೂ ಅನುದಾನ ದೊರೆತಿದೆ.

ಜೆಎಂಎಫ್‌ಸಿ ನ್ಯಾಯಾಲಯ: ಸುಮಾರು ₹9.83 ಕೋಟಿ ವೆಚ್ಚದ ನ್ಯಾಯಾಲಯ ಕಟ್ಟಡಕ್ಕೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ತಾಲೂಕು ಕ್ರೀಡಾಂಗಣ: ಸುಮಾರು ₹8.50 ಕೋಟಿ ವೆಚ್ಚದ ಕ್ರೀಡಾಂಗಣ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮಂಜೂರಾತಿ ದೊರೆತಿದೆ.

100 ಹಾಸಿಗೆಗಳ ತಾಲೂಕು ಆಸ್ಪತ್ರೆ: ಸುಮಾರು ₹43 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ಬುದ್ಧ–ಬಸವ–ಅಂಬೇಡ್ಕರ್ ಭವನ: ಸುಮಾರು ₹15 ಕೋಟಿ ವೆಚ್ಚದ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಉದ್ದೇಶವಿದೆ.

ಈ ಎಲ್ಲ ಯೋಜನೆಗಳು ಸಾಕಾರಗೊಂಡಲ್ಲಿ ಕುಕನೂರಿನ ಆಡಳಿತಾತ್ಮಕ ವ್ಯವಸ್ಥೆ, ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ಸಾಮಾಜಿಕ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

18 ತಿಂಗಳಲ್ಲಿ ಪ್ರಜಾಸೌಧ ಪೂರ್ಣಗೊಳಿಸುವ ಗುರಿ

ಪ್ರಸ್ತುತ ಕಾಮಗಾರಿ ಸಾಗುತ್ತಿರುವ ವೇಗವನ್ನು ಗಮನಿಸಿದರೆ, ಸುಮಾರು 18 ತಿಂಗಳಲ್ಲಿ ಪ್ರಜಾಸೌಧ ಕಟ್ಟಡವನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದು ಕಾಮಗಾರಿ ಮೂಲಗಳು ತಿಳಿಸಿವೆ.

ಬಹುದಿನಗಳ ಬೇಡಿಕೆಯಾಗಿದ್ದ ಪ್ರಜಾಸೌಧ ನಿರ್ಮಾಣ ಕಾಮಗಾರಿ ಇದೀಗ ಭರದಿಂದ ಸಾಗುತ್ತಿರುವುದು ತಾಲೂಕಿನ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದರ ಜತೆಗೆ ನಿರ್ಮಾಣದ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

Prajavikshane

Chandru R Bhanapaur

Leave a Reply

error: Content is protected !!