ಬೆಂಗಳೂರು : ರಾಜ್ಯದಲ್ಲಿ ಸರ್ಕಾರ ಇದೀಗ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆಗೆ ಚಾಲನೆ ನೀಡುವ ಸೂಚಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತು ಕಾರ್ಮಿಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಾರ್ಮಿಕ ಇಲಾಖೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಎಂದಿದೆ.
ಅರ್ಹ ವಿದ್ಯಾರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಆಯಾ ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಅಧಿಕಾರಿಗಳ ಕಚೇರಿಯಿಂದ ಪಡೆದು, ಅರ್ಜಿಯನ್ನು ಸಲ್ಲಿಸಬಹುದು. ಇದರ ಜೊತಗೆ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಕಟ್ಟಡ ಕಾರ್ಮಿಕರ ನೋಂದಣಿ ಗುರುತಿನ ಚೀಟಿ, ಮಕ್ಕಳ ಆಧಾರ್ ಕಾರ್ಡ್, ವ್ಯಾಸಂಗ ದೃಢೀಕರಣ ಪತ್ರ, ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿ, ಇದುವರೆಗೆ ಯಾವುದೇ ಯೋಜನೆಯಡಿಯಲ್ಲಿ ಲ್ಯಾಪ್‍ಟಾಪ್ ಪಡೆಯದಿರುವ ಬಗ್ಗೆ ಸ್ವಯಂ ದೃಢೀಕೃತ ಪತ್ರ ಇವುಗಳನ್ನು ಲಗತ್ತಿಸಿ, ಮುಂದಿನ ತಿಂಗಳು ಸೆಪ್ಟೆಂಬರ್ 15 ರೊಳಗಾಗಿ ಇಲಾಖಾ ಕಚೇರಿಗೆ ಸಲ್ಲಿಸುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.