PV NEWS : ಜಾಬ್ ಕಾರ್ಡ್ ಪಡೆಯಿರಿ, ಉದ್ಯೋಗ ಭದ್ರತೆ ಪಡೆಯಿರಿ: ಬೆಟದಪ್ಪ ಮಾಳೆಕೊಪ್ಪ
ಕುಕನೂರು ತಾಲೂಕಿನ 15 ಗ್ರಾ.ಪಂ.ಗಳಲ್ಲಿ ‘ಜಾಬ್ ಕಾರ್ಡ್ ಮೇಳ’
PV NEWS ಕನ್ನಡ 24×7
ಕುಕನೂರು, ಆ. 19 : ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕುಕನೂರು ತಾಲೂಕಿನ ಎಲ್ಲ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಶೇಷ ‘ಜಾಬ್ ಕಾರ್ಡ್ ಮೇಳ’ ಆಯೋಜಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೆಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಲಸೆ ತಡೆಯುವುದರ ಜೊತೆಗೆ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಜಾಬ್ ಕಾರ್ಡ್ ಹೊಂದಿರದ ಅರ್ಹ ಕುಟುಂಬಗಳು ನಮೂನೆ–1ರಲ್ಲಿ ಅರ್ಜಿ ಸಲ್ಲಿಸಿ ಹೊಸ ಜಾಬ್ ಕಾರ್ಡ್ ಪಡೆಯಬಹುದಾಗಿದೆ. ತಾಂತ್ರಿಕ ಕಾರಣಗಳಿಂದ ನಿಷ್ಕ್ರಿಯಗೊಂಡಿರುವ ಅಥವಾ ರದ್ದಾಗಿರುವ ಜಾಬ್ ಕಾರ್ಡ್‌ಗಳ ಮರುಪರಿಶೀಲನೆಯನ್ನೂ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
125 ದಿನಗಳ ಉದ್ಯೋಗಕ್ಕೆ ಅವಕಾಶ
ಹೊಸ ನಿಯಮದನ್ವಯ ವಾರ್ಷಿಕ ಉದ್ಯೋಗದ ಮಿತಿಯನ್ನು 100ರಿಂದ 125 ಮಾನವ ದಿನಗಳಿಗೆ ಹೆಚ್ಚಿಸಲಾಗಿದ್ದು, ಗ್ರಾಮೀಣ ಕೂಲಿ ಕಾರ್ಮಿಕರು ಹಾಗೂ ಅರ್ಹ ಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಟದಪ್ಪ ಮಾಳೆಕೊಪ್ಪ ಮನವಿ ಮಾಡಿದ್ದಾರೆ.
ಮೇಳದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಕಲಚೇತನರು, ಮಹಿಳಾ ಪ್ರಧಾನ ಕುಟುಂಬಗಳು ಹಾಗೂ ಭೂಹೀನ ಕೃಷಿ ಕಾರ್ಮಿಕರಿಗೆ ವಿಶೇಷ ಆದ್ಯತೆ ನೀಡಲಾಗುವುದು.
ಅಗತ್ಯ ದಾಖಲೆಗಳೇನು?
ಜಾಬ್ ಕಾರ್ಡ್ ಪಡೆಯಲು ಬಯಸುವ ಕುಟುಂಬದ ವಯಸ್ಕ ಸದಸ್ಯರು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ಪುಸ್ತಕದ ನಕಲು ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸಬೇಕು.
ತಾಲೂಕಿನ ಯಾವುದೇ ಅರ್ಹ ಕುಟುಂಬವು ಯೋಜನೆಯ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಟದಪ್ಪ ಮಾಳೆಕೊಪ್ಪ ಕೋರಿದ್ದಾರೆ.