You are currently viewing PV NEWS : ಬುದ್ಧ–ಬಸವ–ಅಂಬೇಡ್ಕರ್ ಸಂದೇಶಗಳು ಇಂದಿಗೂ ಪ್ರಸ್ತುತ: ಜಿ.ಎಸ್. ಗೋನಾಳ

PV NEWS : ಬುದ್ಧ–ಬಸವ–ಅಂಬೇಡ್ಕರ್ ಸಂದೇಶಗಳು ಇಂದಿಗೂ ಪ್ರಸ್ತುತ: ಜಿ.ಎಸ್. ಗೋನಾಳ

PV NEWS : ಬುದ್ಧ–ಬಸವ–ಅಂಬೇಡ್ಕರ್ ಸಂದೇಶಗಳು ಇಂದಿಗೂ ಪ್ರಸ್ತುತ: ಜಿ.ಎಸ್. ಗೋನಾಳ

PV NEWS ಕನ್ನಡ 24×7: 

‘ಭಾವಬಯಲು’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕುಕನೂರು, ಆ.23: ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತು, ಅವುಗಳನ್ನು ಬರಹಗಳ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಕೊಪ್ಪಳ ಜಿಲ್ಲಾ ಅಧ್ಯಕ್ಷ ಜಿ.ಎಸ್. ಗೋನಾಳ ಹೇಳಿದರು.

ಭಾನುವಾರ ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಮನ್ವಿತಾ ಪ್ರಕಾಶನ, ಬೇಣಕಲ್ಲ ಹಾಗೂ ಚುಟುಕು ಸಾಹಿತ್ಯ ಪರಿಷತ್ ಕುಕನೂರು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಬಸವರಾಜ ಉಪ್ಪಿನ ಅವರು ರಚಿಸಿರುವ ಆಧುನಿಕ ವಚನಗಳ ಚೊಚ್ಚಲ ಕೃತಿ ‘ಭಾವಬಯಲು’ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುವುದು ಸುಲಭವಾದರೂ ವಚನ ಸಾಹಿತ್ಯ ರಚನೆ ಅಷ್ಟು ಸುಲಭದ ಕೆಲಸವಲ್ಲ. ಬಸವಾದಿ ಶರಣರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬಸವರಾಜ ಉಪ್ಪಿನ ಅವರು ಉತ್ತಮ ಕೃತಿ ರಚಿಸಿದ್ದಾರೆ. ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿರುವ ‘ಭಾವಬಯಲು’ ಕೃತಿ ಮುಂದಿನ ದಿನಗಳಲ್ಲಿ ಪಠ್ಯಕ್ರಮದ ಭಾಗವಾಗಿ ಹೊರಹೊಮ್ಮಲಿ ಎಂದು ಗೋನಾಳ ಆಶಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಅನ್ನದಾನೇಶ್ವರ ಶಾಖಾ ಮಠದ ಪೂಜ್ಯ ಡಾ. ಮಹಾದೇವ ಮಹಾಸ್ವಾಮಿಗಳು ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎಂ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಕೆ.ಬಿ. ಬ್ಯಾಳಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಚನ ಸಾಹಿತ್ಯವು ವಿಭಿನ್ನ ಹಾಗೂ ವಿಶಿಷ್ಟ ಸ್ಥಾನ ಹೊಂದಿದ್ದು, ಕನ್ನಡ ಭಾಷೆಗೆ ಅಮೋಘ ಕೊಡುಗೆ ನೀಡಿದೆ ಎಂದು ಹೇಳಿದರು.

ಸಾಹಿತಿ ಭೂಜರಾಜ ಸೋಪಿಮಠ ಅವರು ‘ಭಾವಬಯಲು’ ಕೃತಿಯ ಪರಿಚಯ ಮಾಡಿಕೊಟ್ಟರು. ಕೃತಿಕಾರ ಬಸವರಾಜ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಆರ್.ಪಿ. ರಾಜೂರ, ಫಕೀರಪ್ಪ ವಜ್ರಬಂಡಿ, ಕೊಟ್ರೇಶ್ ಉಪ್ಪಿನ, ರುದ್ರಪ್ಪ ಭಂಡಾರಿ, ಮಹೇಶ ಸಬರದ, ಉಮೇಶ ಕಂಬಳಿ, ಮಾರುತೇಶ ತಳವಾರ, ಕಳಕಪ್ಪ ಕುಂಬಾರ, ಚಂದ್ರು ಭಾನಾಪುರ, ಬಸವರಾಜ ಕೊಡ್ಲಿ, ಶರಣಪ್ಪ ಕೊಪ್ಪದ ಸೇರಿದಂತೆ ಹಲವು ಸೇರಿದಂತೆ ಸಾಹಿತ್ಯಾಸಕ್ತರು, ಶಿಕ್ಷಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಂತರ ವಿವಿಧ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಜಾನಪದ ಕಲಾವಿದ ಮಹಿಳೆಯರಿಂದ ನಡೆದ ಸಾಂಪ್ರದಾಯಿಕ ಜಾನಪದ ಹಾಗೂ ಶೋಭಾನ ಪದಗಳ ಗಾಯನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು. ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಅವರ ಸಂಗೀತ ಸೇವೆ ಸಂಗೀತ ರಸದೌತಣ ಉಣಿಸಿತು.

ಮೇಘರಾಜ ಜಿಡಗಿ ಪ್ರಾರ್ಥನೆ ನೆರವೇರಿಸಿದರು. ರಾಣಿ ಹಳ್ಳಿ ಸ್ವಾಗತಿಸಿದರು. ಶಿಕ್ಷಕ ವಸಂತ ಗುಡಿ ಕಾರ್ಯಕ್ರಮ ನಿರೂಪಿಸಿದರು. ರವಿ ಹಿರೇಮನಿ ವಂದನಾರ್ಪಣೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸತ್ಕರಿಸಲಾಯಿತು. ಸಾಹಿತ್ಯ, ಸಂಸ್ಕೃತಿ, ಸಂಗೀತ ಹಾಗೂ ಸಾಮಾಜಿಕ ಚಿಂತನೆಗಳ ಸಮ್ಮಿಲನಕ್ಕೆ ಸಾಕ್ಷಿಯಾದ ಕಾರ್ಯಕ್ರಮದಲ್ಲಿ ‘ಭಾವಬಯಲು’ ಕೃತಿಯ ಕುರಿತು ಮೆಚ್ಚುಗೆ ವ್ಯಕ್ತವಾಯಿತು.

Prajavikshane

Chandru R Bhanapaur

Leave a Reply

error: Content is protected !!