You are currently viewing PV NEWS : ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಉಚಿತ ಆರೋಗ್ಯಸೇವೆ ವಿಸ್ತರಣೆಯ ಉದ್ದೇಶ: ಸದ್ಗುರು ಶ್ರೀ ಮಧುಸೂದನ ಸಾಯಿ

PV NEWS : ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಉಚಿತ ಆರೋಗ್ಯಸೇವೆ ವಿಸ್ತರಣೆಯ ಉದ್ದೇಶ: ಸದ್ಗುರು ಶ್ರೀ ಮಧುಸೂದನ ಸಾಯಿ

PV NEWS : ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಉಚಿತ ಆರೋಗ್ಯಸೇವೆ ವಿಸ್ತರಣೆಯ ಉದ್ದೇಶ: ಸದ್ಗುರು ಶ್ರೀ ಮಧುಸೂದನ ಸಾಯಿ

PV NEWS ಕನ್ನಡ 24×7 : 

ಕೊಪ್ಪಳ, ಆ 23 : ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಹಾಗೂ ವಾಗ್ಮಿ ಗಂಗಾವತಿ ಪ್ರಾಣೇಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೊಪ್ಪಳ ಜಿಲ್ಲೆಯ ಹಲವು ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಾಗಲಿದ್ದು, ಬಳಿಕ ಈ ಭಾಗದಲ್ಲಿ ಆರೋಗ್ಯ ಸೇವೆಯನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಆಶಯವಿದೆ. ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ಆರೋಗ್ಯ ದಾಸೋಹದ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದರು.

ಪೋಷಕರಿಬ್ಬರೂ ಉದ್ಯೋಗದಲ್ಲಿರುವ ಹಿನ್ನೆಲೆಯಲ್ಲಿ ಮಕ್ಕಳ ಬೆಳವಣಿಗೆ ಹಾಗೂ ಚಟುವಟಿಕೆಗಳ ಮೇಲೆ ಗಮನ ಹರಿಸಲು ಸಮಯದ ಕೊರತೆ ಉಂಟಾಗುತ್ತಿದೆ. ಇದರ ನಡುವೆ ಸಾಮಾಜಿಕ ಮಾಧ್ಯಮಗಳ ಪ್ರಭಾವವೂ ಮಕ್ಕಳ ಮೇಲೆ ಹೆಚ್ಚಾಗುತ್ತಿದೆ. ಮಕ್ಕಳು ದಾರಿ ತಪ್ಪುವ ಪರಿಸ್ಥಿತಿ ಭವಿಷ್ಯದ ಸಮಾಜಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.

ವಿದೇಶಗಳಲ್ಲಿ ಕಂಡುಬರುವ ಮಕ್ಕಳಲ್ಲಿನ ಹಿಂಸಾಚಾರ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಹಾಗೂ ಶಸ್ತ್ರಾಸ್ತ್ರಗಳ ದುರುಪಯೋಗದಂತಹ ಸಮಸ್ಯೆಗಳು ಭಾರತದಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹ ಸವಾಲುಗಳಿಗೆ ಮೌಲ್ಯಾಧಾರಿತ ಶಿಕ್ಷಣವೇ ಶಾಶ್ವತ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

‘ವಿಕಸಿತ ಭಾರತ’ ನಿರ್ಮಾಣವಾಗಬೇಕಾದರೆ ಮೊದಲು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಜನರಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬಡತನ ಹಾಗೂ ಮೂಲಸೌಲಭ್ಯಗಳ ಕೊರತೆಯನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಗುರುಕುಲದ ಮೂಲಕ ಶಿಕ್ಷಣ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಕೈಗಾರಿಕೋದ್ಯಮಿ ಶ್ರೀನಿವಾಸ ಗುಪ್ತ, ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ ಹಾಗೂ ಕರಡಿ ಸಂಗಣ್ಣ, ಶಾರದಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ವಿ.ಆರ್. ಪಾಟೀಲ್, ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ. ಶರಣಪ್ಪ, ಉದ್ಯಮಿ ಗುರುರಾಜ್ ಹಾಲಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಮೂಲಕ ನಡೆಯುತ್ತಿರುವ ಸೇವಾ ಚಟುವಟಿಕೆಗಳ ಕುರಿತು ವಿಡಿಯೊ ಪ್ರದರ್ಶಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಶಾಂತಗೌಡ ಬಿರಾದಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಗುರುಕುಲದ ವಿದ್ಯಾರ್ಥಿಗಳು ‘ಸಾಯಿ ಸಿಂಫನಿ ಆರ್ಕೆಸ್ಟ್ರಾ’ ಮೂಲಕ ಸ್ವರಮೇಳ ಪ್ರಸ್ತುತಪಡಿಸಿದರು.

ಎಚ್‌.ಡಿ. ಪಾಟೀಲರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ…!

ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಡಾ. ಎಚ್‌.ಡಿ. ಪಾಟೀಲ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ‘ಕರ್ನಾಟಕ ಪರಿವರ್ತಕ ಪ್ರಶಸ್ತಿ’ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್‌.ಡಿ. ಪಾಟೀಲ, ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳನ್ನು ಈ ಭಾಗಕ್ಕೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ‘ಕೃಷಿ ಋಷಿ’ ಮೂಲಕ ಜಿಲ್ಲೆಯ ರೈತರನ್ನೂ ಗೌರವಿಸಬೇಕು ಎಂದು ಅವರು ಕೋರಿದರು.

‘ಸೇವೆಗೆ ಮಿಗಿಲಾದ ಧರ್ಮವಿಲ್ಲ’

ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಸಂದೇಶ ಕಳುಹಿಸಿದ್ದರು.

‘ಸೇವೆಗೆ ಮಿಗಿಲಾದ ಧರ್ಮವಿಲ್ಲ, ನಿಸ್ವಾರ್ಥ ಮನಸ್ಸಿಗಿಂತ ದೊಡ್ಡ ಸಂಪತ್ತಿಲ್ಲ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವಾಯಜ್ಞ ಶ್ಲಾಘನೀಯ. ಈ ಸಮಾಜಮುಖಿ ಕಾರ್ಯ ಇನ್ನಷ್ಟು ಜನರಿಗೆ ತಲುಪಬೇಕು’ ಎಂದು ಅವರು ಆಶಯ ವ್ಯಕ್ತಪಡಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ, ಪ್ರತಿ ಜೀವಿಯಲ್ಲೂ ತನ್ನನ್ನು ಕಾಣುವ ಏಕತ್ವದ ಅನುಭವವೇ ನಿಜವಾದ ಜ್ಞಾನ. ಕರುಣೆ ಮತ್ತು ಪ್ರೀತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸುವುದೇ ಶ್ರೇಷ್ಠ ಪೂಜೆ ಎಂದು ಹೇಳಿದರು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

‘ದೇಶಸೇವೆ ಮಾಡುವ ಆಸೆ ಮೊಳೆತಿದೆ’

ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲದ ಏಳನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ತನ್ನ ಜೀವನದ ಅನುಭವ ಹಂಚಿಕೊಂಡರು.

ಆರ್ಥಿಕ ಸಂಕಷ್ಟದಲ್ಲಿದ್ದ ತಮ್ಮ ಕುಟುಂಬಕ್ಕೆ ಶಿಕ್ಷಣದ ವೆಚ್ಚ ನಿರ್ವಹಿಸುವುದು ಕಷ್ಟವಾಗಿತ್ತು. ಗುರುಕುಲಕ್ಕೆ ಸೇರಿದ ಬಳಿಕ ಶಿಕ್ಷಣ, ಊಟ, ವಸತಿ ಹಾಗೂ ಕ್ರೀಡೆ ಸೇರಿದಂತೆ ಹಲವು ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿವೆ. ಅಕ್ಕನಿಗೆ ನರ್ಸಿಂಗ್ ಶಿಕ್ಷಣ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ಉಚಿತ ಚಿಕಿತ್ಸೆ ದೊರೆತಿದೆ ಎಂದು ತಿಳಿಸಿದರು.

‘ದೊಡ್ಡ ವಿಜ್ಞಾನಿಯಾಗಿ ಸಾಕಷ್ಟು ಹಣ ಗಳಿಸಬೇಕು ಎಂಬ ಆಸೆ ಇತ್ತು. ವಿಜ್ಞಾನಿಯಾಗಬೇಕು ಎಂಬ ಆಸೆ ಈಗಲೂ ಇದೆ. ಆದರೆ ಹಣ ಗಳಿಸಬೇಕೆಂಬ ಆಸೆ ಹೋಗಿದೆ. ದೇಶಸೇವೆ ಮಾಡಬೇಕು ಎಂಬ ಆಸೆ ಮೊಳೆತಿದೆ’ ಎಂದು ಪ್ರಜ್ವಲ್ ಹೇಳಿದರು.

58 ವಿದ್ಯಾರ್ಥಿಗಳು ವ್ಯಾಸಂಗ…!

ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಾಜಮುಖಿ ಸೇವೆ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳ ಬದುಕಿನ ಭಾಗವಾಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲ ಕಾರ್ಯನಿರ್ವಹಿಸುತ್ತಿದೆ.

2018ರ ಜೂನ್ 5ರಂದು ಆರಂಭವಾದ ಬಾಲಕರ ಕ್ಯಾಂಪಸ್, ಶಿಕ್ಷಣ ಮತ್ತು ಸೇವೆಯ ಸಮನ್ವಯದ ಕೇಂದ್ರವಾಗಿ ಬೆಳೆದಿದೆ. 50 ಎಕರೆ ಶುಷ್ಕ ಭೂಮಿಯಲ್ಲಿ ಆರಂಭವಾದ ಕ್ಯಾಂಪಸ್‌ ಇದೀಗ ಹಸಿರು ಪರಿಸರದ ಆವರಣವಾಗಿ ರೂಪುಗೊಂಡಿದೆ.

ಈವರೆಗೆ 237 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ 60ರಷ್ಟು ಮಂದಿ ಗ್ರಾಮೀಣ ಹಿನ್ನೆಲೆಯವರು ಹಾಗೂ ಶೇ 93ರಷ್ಟು ಮಂದಿ ಬಿಪಿಎಲ್ ಕುಟುಂಬಗಳಿಗೆ ಸೇರಿದವರು. ಶಿಕ್ಷಣದ ಜತೆಗೆ ವೇದ, ಭಜನೆ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಸಂಸ್ಕಾರಯುತ ಹಾಗೂ ಸಮಾಜಮುಖಿ ನಾಗರಿಕರನ್ನು ರೂಪಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ.

Prajavikshane

Chandru R Bhanapaur

Leave a Reply

error: Content is protected !!