You are currently viewing PV NEWS : ಸಚಿವ ರಾಯರೆಡ್ಡಿ ಅವರ ದೂರದೃಷ್ಟಿ, ಸತ್ಯಸಾಯಿ ಸಂಸ್ಥೆಗಳ ಸೇವೆ: ಕೊಪ್ಪಳದ ಮಕ್ಕಳಿಗೆ ಹೊಸ ಆಶಾಕಿರಣ : ಸದ್ಗುರು ಶ್ರೀ ಮಧುಸೂದನ ಸಾಯಿ

PV NEWS : ಸಚಿವ ರಾಯರೆಡ್ಡಿ ಅವರ ದೂರದೃಷ್ಟಿ, ಸತ್ಯಸಾಯಿ ಸಂಸ್ಥೆಗಳ ಸೇವೆ: ಕೊಪ್ಪಳದ ಮಕ್ಕಳಿಗೆ ಹೊಸ ಆಶಾಕಿರಣ : ಸದ್ಗುರು ಶ್ರೀ ಮಧುಸೂದನ ಸಾಯಿ

PV NEWS : ಸಚಿವ ರಾಯರೆಡ್ಡಿ ಅವರ ದೂರದೃಷ್ಟಿ, ಸತ್ಯಸಾಯಿ ಸಂಸ್ಥೆಗಳ ಸೇವೆ: ಕೊಪ್ಪಳದ ಮಕ್ಕಳಿಗೆ ಹೊಸ ಆಶಾಕಿರಣ : ಸದ್ಗುರು ಶ್ರೀ ಮಧುಸೂದನ ಸಾಯಿ

ಸಚಿವರಾಗಿದ್ದಾಗ ನೀಡಿದ ಸಲಹೆ, ಬೆಂಬಲವೇ ಕೊಪ್ಪಳಕ್ಕೆ ಸತ್ಯಸಾಯಿ ಸಂಸ್ಥೆಗಳ ಪ್ರವೇಶಕ್ಕೆ ಕಾರಣ: ಮಧುಸೂದನ್ ಸಾಯಿ

PV NEWS ಕನ್ನಡ 24×7

ಕೊಪ್ಪಳ, ಆ.24: ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ ಅವರು ನೀಡಿದ ಸಲಹೆ ಮತ್ತು ಬೆಂಬಲವೇ ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಹಾಗೂ ವಿವಿಧ ಉಚಿತ ಶಿಕ್ಷಣ, ಪೋಷಕಾಂಶ ಮತ್ತು ಆರೋಗ್ಯ ಸೇವಾ ಕಾರ್ಯಕ್ರಮಗಳು ವಿಸ್ತರಣೆಯಾಗಲು ಪ್ರಮುಖ ಕಾರಣವಾಯಿತು ಎಂದು ಸದ್ಗುರು ಶ್ರೀ ಮಧುಸೂದನ್ ಸಾಯಿ ಹೇಳಿದರು.

ಕೊಪ್ಪಳದಲ್ಲಿ ನಿನ್ನೆ (ಆ.23 ರಂದು) ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ದಿವ್ಯ ಸಂಜೆ ಎಂಬ ಸಂವಾದ ಕಾರ್ಯಕ್ರಮ ನಡೆದಿತ್ತು, ಈ ಹಿನ್ನೆಲೆಯನ್ನು ಸ್ಮರಿಸಿದ ಅವರು, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ರಾಯರೆಡ್ಡಿ ಅವರಿಗಿದ್ದ ಕಾಳಜಿ, ದೂರದೃಷ್ಟಿ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.

ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಸ್ಮರಿಸಿದ ಮಧುಸೂದನ್ ಸಾಯಿ, ‘ನಮ್ಮ ಸಂಸ್ಥೆಯ ಕಾರ್ಯವನ್ನು ವೀಕ್ಷಿಸಿದ ರಾಯರೆಡ್ಡಿ ಅವರು, ನೀವು ಕೇಳಿದ ಅನುಮತಿಯನ್ನು ನಾನು ನೀಡುತ್ತೇನೆ. ಆದರೆ ನೀವು ನನಗೊಂದು ಮಾತು ಕೊಡಬೇಕು. ಹಿಂದುಳಿದ ಕೊಪ್ಪಳ ಭಾಗದಲ್ಲಿ ಉಚಿತ ಗುರುಕುಲ ಹಾಗೂ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದರು’ ಎಂದು ಹೇಳಿದರು.

‘ಹನುಮಂತನಂತೆ ಅವರು ನಮಗೆ ಆ ಸಂದೇಶವನ್ನು ತಲುಪಿಸಿ, ಕೊಪ್ಪಳಕ್ಕೆ ನಮ್ಮ ಸಂಸ್ಥೆ ಬರುವಂತೆ ಮಾಡಿದರು’ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಸ್ಥಿತಿಗತಿ ಕುರಿತು ಕಳವಳ..!!

ಉತ್ತರ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಕೊಪ್ಪಳ ಸೇರಿದಂತೆ ಈ ಭಾಗದಲ್ಲಿ ಬಡತನದ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

‘ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಅಂಕಿ-ಅಂಶಗಳನ್ನು ಗಮನಿಸಿದಾಗ ಶೇಕಡ 93ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿನ ಸ್ಥಿತಿಯಲ್ಲಿದ್ದು, ಅತಿ ಕಡುಬಡತನವನ್ನು ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷಗಳು ಕಳೆದಿದ್ದು, ಈಗ 100ನೇ ವರ್ಷದತ್ತ ಸಾಗುತ್ತಿದ್ದೇವೆ. ‘ವಿಕಸಿತ ಭಾರತ’ದ ಗುರಿ ಸಾಧಿಸಬೇಕಾದರೆ ನಗರಗಳ ಅಭಿವೃದ್ಧಿಯಷ್ಟೇ ಸಾಕಾಗುವುದಿಲ್ಲ. ದೇಶದ ಹಳ್ಳಿಗಳು ಮತ್ತು ಅಲ್ಲಿನ ಬಡ ಕುಟುಂಬಗಳು ಅಭಿವೃದ್ಧಿ ಹೊಂದಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆ ದೊರೆತಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಕೊರತೆಯೊಂದಿಗೆ ಸೂಕ್ತ ಪೋಷಕಾಂಶ ದೊರೆಯದಿರುವುದೂ ಪ್ರಮುಖ ಸಮಸ್ಯೆಯಾಗಿದೆ. ಇದನ್ನು ಮನಗಂಡು ಸಂಸ್ಥೆಯು ಕೊಪ್ಪಳ ಭಾಗದಲ್ಲಿ ಶಿಕ್ಷಣ ಮತ್ತು ಪೋಷಕಾಂಶದ ಕ್ಷೇತ್ರದಲ್ಲಿ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಮಧುಸೂದನ್ ಸಾಯಿ ತಿಳಿಸಿದರು.

ಕೊಪ್ಪಳದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಉಚಿತ ಗುರುಕುಲ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

55 ಲಕ್ಷ ಮಕ್ಕಳಿಗೆ ‘ಸಾಯಿಶೂರ್’ ಪೌಷ್ಟಿಕಾಂಶ ಮಿಶ್ರಣ

ಸಂಸ್ಥೆಯ ಪ್ರಮುಖ ಸೇವಾ ಕಾರ್ಯಕ್ರಮಗಳಲ್ಲಿ ಒಂದಾಗಿರುವ ‘ಸಾಯಿಶೂರ್’ (SaiSure) ಪೌಷ್ಟಿಕಾಂಶದ ಆರೋಗ್ಯ ಮಿಶ್ರಣ ಕಾರ್ಯಕ್ರಮವಾಗಿದೆ. ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿ ಕರ್ನಾಟಕದಾದ್ಯಂತ ಸುಮಾರು 55 ಲಕ್ಷ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ವಿತರಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯೊಂದರಲ್ಲೇ ಸುಮಾರು 2 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಜಾವಾ ಸೇರಿದಂತೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ನೀಡಲಾಗುತ್ತಿದೆ.

ಮಕ್ಕಳ ದೈಹಿಕ ಬೆಳವಣಿಗೆ, ಆರೋಗ್ಯ ಹಾಗೂ ಕಲಿಕೆಯ ಸಾಮರ್ಥ್ಯ ಸುಧಾರಿಸಲು ಅಗತ್ಯವಾದ ಪೌಷ್ಟಿಕಾಂಶ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಮುಂದಿನ ಗುರಿ ಉಚಿತ ಆರೋಗ್ಯ ಸೇವೆ

ಶಿಕ್ಷಣ ಮತ್ತು ಪೋಷಕಾಂಶದ ನಂತರ ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಮಧುಸೂದನ್ ಸಾಯಿ ಹೇಳಿದರು.

ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಉಚಿತ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಗ್ರಾಮೀಣ ಹಾಗೂ ಬಡ ಕುಟುಂಬಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಹಣದ ಅಡಚಣೆಯಿಂದ ದೂರವಾಗಬಾರದು ಎಂಬುದು ಸಂಸ್ಥೆಯ ಆಶಯವಾಗಿದೆ ಎಂದು ತಿಳಿಸಿದರು.

ಹಳ್ಳಿಗಳ ಅಭಿವೃದ್ಧಿಯೇ ವಿಕಸಿತ ಭಾರತದ ಅಡಿಪಾಯ

ಗ್ರಾಮೀಣ ಭಾಗದ ಬಡತನ ಮತ್ತು ಅಲ್ಲಿನ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಹತ್ತಿರದಿಂದ ಗಮನಿಸಿದಾಗ, ಇಂತಹ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಕೆಲಸ ಮಾಡಬೇಕೆಂಬ ನಿಶ್ಚಯವಾಗಿದೆ ಎಂದು ಅವರು ಹೇಳಿದರು.

ವಿಕಸಿತ ಭಾರತದ ನಿರ್ಮಾಣಕ್ಕೆ ಹಳ್ಳಿಗಳ ಅಭಿವೃದ್ಧಿ, ಬಡ ಕುಟುಂಬಗಳ ಸಬಲೀಕರಣ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಮರ್ಪಕ ಪೋಷಕಾಂಶ ಮತ್ತು ಉಚಿತ ಆರೋಗ್ಯ ಸೇವೆಗಳು ಪ್ರಮುಖ ಆಧಾರಗಳಾಗಿವೆ. ಈ ನಿಟ್ಟಿನಲ್ಲಿ ಕೊಪ್ಪಳ ಹಾಗೂ ಉತ್ತರ ಕರ್ನಾಟಕದಲ್ಲಿ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಹಂತಹಂತವಾಗಿ ವಿಸ್ತರಿಸುವ ಉದ್ದೇಶವಿದೆ ಎಂದು ಮಧುಸೂದನ್ ಸಾಯಿ ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಪ್ರವೇಶದ ಹಿಂದೆ ಬಸವರಾಜ ರಾಯರೆಡ್ಡಿ ಅವರ ಸಲಹೆ, ಆಹ್ವಾನ ಮತ್ತು ಸಾಮಾಜಿಕ ಕಾಳಜಿ ಪ್ರಮುಖ ಪಾತ್ರ ವಹಿಸಿದೆ ಎಂಬ ಸಂಗತಿಯನ್ನು ಅವರು ತಮ್ಮ ಮಾತಿನಲ್ಲಿ ನೆನಪಿಸಿಕೊಂಡರು.

Prajavikshane

Chandru R Bhanapaur

Leave a Reply

error: Content is protected !!