You are currently viewing PV NEWS : ಬಳಕೆಗೆ ಯೋಗ್ಯ ಔಷಧಿಗಳು ರಸ್ತೆಬದಿ ತಿಪ್ಪೆಗೆ! :  ಸಾರ್ವಜನಿಕರ ಆಕ್ರೋಶ! 

PV NEWS : ಬಳಕೆಗೆ ಯೋಗ್ಯ ಔಷಧಿಗಳು ರಸ್ತೆಬದಿ ತಿಪ್ಪೆಗೆ! :  ಸಾರ್ವಜನಿಕರ ಆಕ್ರೋಶ! 

PV NEWS : ಬಳಕೆಗೆ ಯೋಗ್ಯ ಔಷಧಿಗಳು ರಸ್ತೆಬದಿ ತಿಪ್ಪೆಗೆ! :  ಸಾರ್ವಜನಿಕರ ಆಕ್ರೋಶ! 

ಲಕ್ಷಾಂತರ ಮೌಲ್ಯದ ಐರನ್–ಫೋಲಿಕ್ ಆಸಿಡ್ ಮಾತ್ರೆ, ಸಿರಪ್, ವಿಟಮಿನ್‌–ಸಿ ಔಷಧಿಗಳ ರಾಶಿ; ಸಾರ್ವಜನಿಕರ ಆಕ್ರೋಶ!!

PV NEWS ಕನ್ನಡ 24×7

ಗಂಗಾವತಿ, ಆ 24 : ಬಡವರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಸರ್ಕಾರ ಉಚಿತವಾಗಿ ವಿತರಿಸಲು ಸರಬರಾಜು ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳನ್ನು ರಸ್ತೆಬದಿಯ ತಿಪ್ಪೆಗೆ ಎಸೆದಿರುವ ಘಟನೆ ಗಂಗಾವತಿ ನಗರದ ಜಯನಗರ ಬೈಪಾಸ್ ರಸ್ತೆಯಲ್ಲಿ ಬೆಳಕಿಗೆ ಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪೂರೈಕೆಯಾಗಿದ್ದ ಐರನ್–ಫೋಲಿಕ್ ಆಸಿಡ್ ಮಾತ್ರೆಗಳು, ಸಿರಪ್ ಹಾಗೂ ವಿಟಮಿನ್‌–ಸಿ ಮಾತ್ರೆಗಳು ಸೇರಿದಂತೆ ವಿವಿಧ ಔಷಧಿಗಳು ತಿಪ್ಪೆಯಲ್ಲಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಬಾಣಂತಿಯರು, ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಿದ್ದ ಔಷಧಿಗಳು ಈ ರೀತಿಯಾಗಿ ತಿಪ್ಪೆ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2027ರವರೆಗೆ ಬಳಕೆಗೆ ಯೋಗ್ಯವಾಗಿದ್ದ ಔಷಧಿಗಳು!

ತಿಪ್ಪೆಗೆ ಎಸೆಯಲಾಗಿರುವ ಔಷಧಿಗಳ ಪೈಕಿ ಹಲವು ಔಷಧಿಗಳು 2027ರವರೆಗೂ ಬಳಕೆಗೆ ಯೋಗ್ಯವಾಗಿರುವ ಅವಧಿ ಹೊಂದಿವೆ ಎನ್ನಲಾಗಿದೆ. ಬಳಕೆಗೆ ಯೋಗ್ಯವಾಗಿದ್ದ ಸರ್ಕಾರಿ ಔಷಧಿಗಳು ಫಲಾನುಭವಿಗಳ ಕೈ ಸೇರದೆ ರಸ್ತೆಬದಿ ತಿಪ್ಪೆಗೆ ಸೇರುವಂತಾಗಿರುವುದು ಇಲಾಖೆಯ ಕಾರ್ಯವೈಖರಿ ಹಾಗೂ ಮೇಲ್ವಿಚಾರಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾರ್ವಜನಿಕರ ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಔಷಧಿಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಅವುಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಬದಲು ಈ ರೀತಿಯಾಗಿ ಬಿಸಾಡಿರುವುದು ಸರ್ಕಾರಿ ಸಂಪನ್ಮೂಲಗಳ ದುರ್ಬಳಕೆಯೇ? ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಮುಂದಿಟ್ಟಿದ್ದಾರೆ.

ಅಧಿಕಾರಿಗಳ ಮೇಲ್ವಿಚಾರಣೆಗೆ ಪ್ರಶ್ನೆ

ಔಷಧಿಗಳನ್ನು ಯಾವ ಕೇಂದ್ರಕ್ಕೆ ಅಥವಾ ಯಾವ ಫಲಾನುಭವಿಗಳಿಗೆ ವಿತರಿಸಲು ಸರಬರಾಜು ಮಾಡಲಾಗಿತ್ತು? ಅವುಗಳನ್ನು ತಿಪ್ಪೆಗೆ ಎಸೆದವರು ಯಾರು? ಔಷಧಿಗಳ ದಾಸ್ತಾನು ಮತ್ತು ವಿತರಣೆಯ ದಾಖಲೆಗಳಲ್ಲಿ ಈ ಔಷಧಿಗಳ ವಿವರ ಏನಿದೆ? ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕಿದೆ.

ಘಟನೆಯ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಔಷಧಿಗಳ ಮೂಲ ಹಾಗೂ ಅವುಗಳನ್ನು ತಿಪ್ಪೆಗೆ ಎಸೆದಿರುವುದರ ಹಿಂದಿನ ಕಾರಣವನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರದಿಂದ ಉಚಿತವಾಗಿ ದೊರೆಯಬೇಕಾದ ಔಷಧಿಗಳು ಅಗತ್ಯವಿರುವವರ ಕೈ ಸೇರದೆ ತಿಪ್ಪೆ ಪಾಲಾಗುತ್ತಿರುವುದು ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆ ಮೂಡಿಸಿದೆ. ಈ ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಸಿ, ಸಾರ್ವಜನಿಕರಿಗೆ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

PV NEWS ಕನ್ನಡ 24×7

— ಇದು ಪ್ರಜೆಗಳ ಪರ ಹದ್ದಿನ ಕಣ್ಣು.

Prajavikshane

Chandru R Bhanapaur

Leave a Reply

error: Content is protected !!