PV NEWS : ಕುಕನೂರು | ಇಸ್ಲಾಂ ಕುರಿತು ತಪ್ಪು ಗ್ರಹಿಕೆ ಬೇಡ; ಧರ್ಮದ ತತ್ವ–ಇತಿಹಾಸ ಅರಿಯಬೇಕು: ಸಚಿವ ರಾಯರೆಡ್ಡಿ
PV NEWS ಕನ್ನಡ 24×7 :
ಕುಕನೂರು, ಆ. 30: ಇಸ್ಲಾಂ ಧರ್ಮದ ಕುರಿತು ಸರಿಯಾದ ತಿಳುವಳಿಕೆ ಇಲ್ಲದೆ ಹಲವರು ತಪ್ಪು ಗ್ರಹಿಕೆಗಳನ್ನು ಹೊಂದಿದ್ದಾರೆ. ಇಸ್ಲಾಂ ಧರ್ಮವು ತನ್ನದೇ ಆದ ವಿಶಿಷ್ಟ ತತ್ವಗಳು ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಇತರ ಧರ್ಮಗಳಿಗಿಂತ ಶ್ರೇಷ್ಠತೆಯನ್ನು ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಹೇಳಿದರು.
ಕುಕನೂರು ಪಟ್ಟಣದ ಶಾದಿ ಮಹಲ್‌ನಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಆಯೋಜಿಸಿದ್ದ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಕುರಿತು ಸಮಗ್ರವಾದ ತಿಳುವಳಿಕೆ ಇಲ್ಲದೆ ಅನೇಕರು ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದಾರೆ. ಯಾವುದೇ ಧರ್ಮವನ್ನು ಅರ್ಥಮಾಡಿಕೊಳ್ಳಲು ಅದರ ಮೂಲ ತತ್ವಗಳು, ಧಾರ್ಮಿಕ ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.
ತಾವು ದೇವಾಲಯಗಳು ಅಥವಾ ಮಠ–ಮಾನ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡದಿದ್ದರೂ, ವಿವಿಧ ಧರ್ಮಗಳ ತತ್ವಗಳು, ಧಾರ್ಮಿಕ ಪರಂಪರೆ ಹಾಗೂ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿರುವುದಾಗಿ ರಾಯರೆಡ್ಡಿ ತಿಳಿಸಿದರು.
ಶಾದಿ ಮಹಲ್‌ಗೆ ಮತ್ತಷ್ಟು ಅನುದಾನ..!
ಕುಕನೂರಿನಲ್ಲಿ ನಿರ್ಮಿಸಿರುವ ಶಾದಿ ಮಹಲ್ ಕುರಿತು ಮಾತನಾಡಿದ ಸಚಿವರು, ಈಗಾಗಲೇ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಿಸಲಾಗಿದ್ದು, ಇದು ಫೈವ್‌ಸ್ಟಾರ್ ಹೋಟೆಲ್‌ನಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾದಿ ಮಹಲ್‌ನ ಪಕ್ಕದಲ್ಲಿ ಡೈನಿಂಗ್ ಹಾಲ್ ನಿರ್ಮಿಸಲು ಸರ್ಕಾರದಿಂದ ₹50 ಲಕ್ಷ ಅನುದಾನ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಅನುದಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಡೈನಿಂಗ್ ಹಾಲ್ ನಿರ್ಮಿಸುವಂತೆ ತಿಳಿಸಿದ ಅವರು, ಶಾದಿ ಮಹಲ್ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ನವರು ಮಾತನಾಡಿ, ‘ಮುಸ್ಲಿಂ ಸಮುದಾಯದ ಜನಸಂಖ್ಯೆ ದೊಡ್ಡದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಎಲ್ಲರ ಸೃಷ್ಟಿಕರ್ತ ಒಬ್ಬನೇ ಎಂಬ ಭಾವನೆಯೊಂದಿಗೆ ಪರಸ್ಪರ ಪ್ರೀತಿ ಹಾಗೂ ಗೌರವದಿಂದ ಬದುಕಬೇಕು. ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು ಸರಿಯಲ್ಲ; ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸುವ ಪಕ್ಷಗಳಿಗೆ ಬೆಂಬಲ ನೀಡಬಾರದು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ದೊರೆತಿದ್ದು, ಸಚಿವ ಬಸವರಾಜ ರಾಯರೆಡ್ಡಿ ಅವರು ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ರಾಯರೆಡ್ಡಿ ಅವರಿಗೆ ಇಸ್ಲಾಂ ಧರ್ಮದ ಕುರಿತು ಉತ್ತಮ ಜ್ಞಾನವಿದ್ದು, ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಸಮಾಜದ ಗುರುಗಳಾದ ಸೈಯದ್ ಷಾ ಮರ್ತುಜಾ ಖಾದ್ರಿ, ಶ್ರೀ ಮಹಾದೇವಯ್ಯ ಸ್ವಾಮಿಗಳು ಹಾಗೂ ಸಮಾಜದ ಮುಖಂಡ, ಜಿಪಂ ಮಾಜಿ ಸದಸ್ಯ ಕಾಸಿಮಸಾಬ ತಳಕಲ್ ಅಧ್ಯಕ್ಷತೆ ವಹಿಸಿದ್ದರು.
ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ್, ಅನಿಲ್ ಆಚಾರ, ಶಫಿಸಾಬ ಗುಡಿಹಿಂದಲ್, ದಾವಲಸಾಬ ಕುದುರಿ, ಕೆ. ನಹಿ ಮೊಹಮ್ಮದ್, ವಕೀಲರು, ಕೂತುಬುದ್ದಿನಸಾಬ್ ಮಕ್ಕಪ್ಪನವರ, ಅಬ್ದುಲ್ ಸಾಬ ತಳಕಲ್, ಪೀರಾಹುಸೇನ್ ಹೊಸಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ ಪಾಟೀಲ್, ಕಳಕಪ್ಪ ಕಂಬಳಿ, ಸಿದ್ದಯ್ಯ ಕಳ್ಳಿಮಠ, ಅಂಜುಮನ್ ಕಮಿಟಿ ಅಧ್ಯಕ್ಷ ರಸೀದ್ ಕಣಜಿಗಿರಿ, ಮಾಜಿ ಅಧ್ಯಕ್ಷ ರಸೀದಿ ಮುಬಾರಕ್, ನಾಜಿಯಬೇಗಂ, ಅಬ್ದುಲ್ ಖಾದರ್ ಮುಲ್ಲ, ಅಂದಪ್ಪ ಜವಳಿ, ಪಪಂ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸತ್ಯನಾರಾಯಣ ಹರಪನಹಳ್ಳಿ, ನಾರಾಯಣಪ್ಪ ಕಲಾಲ್, ಶರಣಪ್ಪ ಹೊಸಮನಿ, ಮಂಜುನಾಥ ಕಡೆಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.