You are currently viewing PV NEWS | ‘ರಾಜಕೀಯದಲ್ಲಿ ಶಾಶ್ವತ ದ್ವೇಷವಿಲ್ಲ; ಪ್ರೀತಿಯೇ ಪ್ರಧಾನ’: ಸಚಿವ ಬಸವರಾಜ ರಾಯರೆಡ್ಡಿ

PV NEWS | ‘ರಾಜಕೀಯದಲ್ಲಿ ಶಾಶ್ವತ ದ್ವೇಷವಿಲ್ಲ; ಪ್ರೀತಿಯೇ ಪ್ರಧಾನ’: ಸಚಿವ ಬಸವರಾಜ ರಾಯರೆಡ್ಡಿ

PV NEWS | ‘ರಾಜಕೀಯದಲ್ಲಿ ಶಾಶ್ವತ ದ್ವೇಷವಿಲ್ಲ; ಪ್ರೀತಿಯೇ ಪ್ರಧಾನ’: ಸಚಿವ ಬಸವರಾಜ ರಾಯರೆಡ್ಡಿ

PV NEWS ಕನ್ನಡ 24×7| 

ಟೀಕೆಗೆ ತಿರುಗೇಟು ನೀಡುವ ಶಕ್ತಿ ಇದ್ದರೂ ತಾಳ್ಮೆಯೇ ನನ್ನ ದಾರಿ ಎಂದ ಸಚಿವ; ಸ್ಥಳೀಯ ನಾಯಕರೊಂದಿಗಿನ ರಾಜಕೀಯ–ವೈಯಕ್ತಿಕ ಸಂಬಂಧಗಳ ಕುರಿತು ಮುಕ್ತ ಮಾತು

ಕುಕನೂರು, ಸೆ. 20: “ರಾಜಕೀಯದಲ್ಲಿ ವಿರೋಧಿಗಳಿರುತ್ತಾರೆ; ಆದರೆ ಶಾಶ್ವತ ಶತ್ರುಗಳಿರುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಪ್ರೀತಿ, ವಿಶ್ವಾಸ ಮತ್ತು ತಾಳ್ಮೆ ಮುಖ್ಯ” ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಮಸಬಹಂಚಿನಾಳ ಗ್ರಾಮದಲ್ಲಿ ನಡೆದ ಜನಸಂದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಟೀಕೆಗಳು, ಸ್ಥಳೀಯ ನಾಯಕರೊಂದಿಗಿನ ಸಂಬಂಧ ಹಾಗೂ ತಮ್ಮ ರಾಜಕೀಯ ಜೀವನದ ಅನುಭವಗಳನ್ನು ಮುಕ್ತವಾಗಿ ಪ್ರಸ್ತಾಪಿಸಿದರು.

‘ಪ್ರತ್ಯುತ್ತರ ನೀಡುವ ಶಕ್ತಿ ಇದೆ; ಆದರೆ ತಾಳ್ಮೆಯಿಂದಿದ್ದೇನೆ’

ತಮ್ಮ ವಿರುದ್ಧ ಕೆಲವರು ಅನಗತ್ಯವಾಗಿ ಟೀಕೆ ಮಾಡುವುದು ಹಾಗೂ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಹೇಳಿದ ರಾಯರೆಡ್ಡಿ, ಇದಕ್ಕೆ ಪ್ರತಿಯಾಗಿ ರಾಜಕೀಯ ಸಂಘರ್ಷವನ್ನು ತೀವ್ರಗೊಳಿಸುವ ಬದಲು ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ಹೇಳಿದರು.

“ಯಾರ ಮೇಲೆಯೂ ವೈಯಕ್ತಿಕ ದ್ವೇಷ ಸಾಧಿಸುವುದು ನನ್ನ ಸ್ವಭಾವವಲ್ಲ. ದ್ವೇಷದ ರಾಜಕಾರಣಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ” ಎಂದು ಅವರು ಹೇಳಿದರು.

ಮಾಜಿ ಶಾಸಕ ಗುಳಗಣ್ಣನವರ್ ಹಾಗೂ ಹಾಲಪ್ಪ ಕುಟುಂಬದ ಬಾಂಧವ್ಯ ಪ್ರಸ್ತಾಪ! 

ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ್ ಅವರ ಕುಟುಂಬದೊಂದಿಗಿನ ಸಂಬಂಧವನ್ನು ಪ್ರಸ್ತಾಪಿಸಿದ ರಾಯರೆಡ್ಡಿ, ಅವರ ಧರ್ಮಪತ್ನಿ ಗಂಗಮ್ಮ ಅವರು ತಮಗೆ ಸಹೋದರಿ ಸಮಾನರು ಎಂದು ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಗೌರವ ನೀಡಿದ್ದನ್ನು ಸ್ಮರಿಸಿದ ಸಚಿವರು, “ಅವರ ಪುತ್ರ ನವೀನ್ ಕುಮಾರ್ ಗುಳಗಣ್ಣನವರ್ ರಾಜಕೀಯವಾಗಿ ನನ್ನನ್ನು ಟೀಕಿಸುತ್ತಾರೆ. ಆದರೆ ರಾಜಕೀಯ ಭಿನ್ನಾಭಿಪ್ರಾಯ ಬೇರೆ, ವೈಯಕ್ತಿಕ ಸಂಬಂಧ ಬೇರೆ” ಎಂಬ ನಿಲುವು ವ್ಯಕ್ತಪಡಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಟೀಕೆಗಳನ್ನೂ ಪ್ರಸ್ತಾಪಿಸಿದ ಅವರು, ರಾಜಕೀಯ ಕಾರಣಗಳಿಂದ ಪರಸ್ಪರ ಟೀಕೆಗಳು ನಡೆಯಬಹುದು, ನನಗೆ ಹಾಲಪ್ಪ ಬೈಲಿಲ್ಲ ಅಂದ್ರೆ ಅವರಿಗೆ ಬಿಜೆಪಿಯವರು ಟಿಕೆಟ್ ನೀಡಲ್ಲ, ಈ ಕಾರಣಕ್ಕೆ ನನಗೆ ಕಟುವಾಗಿ ಟೀಕೆ ಮಾಡೋದು ಹಾಲಪ್ಪ ಆಚಾರ್, ಆದರೆ ರಾಜಕೀಯದ ಆಚೆಗೆ ವೈಯಕ್ತಿಕ ಸಂಬಂಧಗಳನ್ನು ಗೌರವಿಸಬೇಕು, ನಾವಿಬ್ರೂ ತುಂಬಾ ಚೆನ್ನಾಗಿ ಸ್ನೇಹಿತರಾಗಿದ್ದೇವೆ, ಆದರೆ ನಿಮಗೆ ಗೊತ್ತಿಲ್ಲ ಎಂದು ಹೇಳಿದರು.

‘ಜನರೇ ಗೆಲ್ಲಿಸುತ್ತಾರೆ, ಜನರೇ ಸೋಲಿಸುತ್ತಾರೆ’

ತಮ್ಮ ರಾಜಕೀಯ ಜೀವನದಲ್ಲಿ 12 ಚುನಾವಣೆಗಳನ್ನು ಎದುರಿಸಿರುವುದಾಗಿ ತಿಳಿಸಿದ ರಾಯರೆಡ್ಡಿ, ಹಲವು ಬಾರಿ ಕ್ಷೇತ್ರದ ಜನರು ತಮ್ಮನ್ನು ಆಯ್ಕೆ ಮಾಡಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.

“ರಾಜಕೀಯದಲ್ಲಿ ಜನರಿಗಿಂತ ದೊಡ್ಡವರು ಯಾರೂ ಇಲ್ಲ. ಗೆಲ್ಲಿಸುವುದೂ ಜನರೇ, ಸೋಲಿಸುವುದೂ ಜನರೇ. ಜನರೇ ದೇವರು ಎಂಬ ನಂಬಿಕೆಯೊಂದಿಗೆ ಅವರ ಸೇವೆ ಮಾಡುವುದು ನನ್ನ ಗುರಿ” ಎಂದು ಹೇಳಿದರು.

14 ಮಹಿಳೆಯರಿಗೆ ₹7 ಲಕ್ಷದ ನೆರವು..!

ಕಾರ್ಯಕ್ರಮದ ಮತ್ತೊಂದು ಭಾಗವಾಗಿ ರಾಬಕೋ ಹಾಲು ಒಕ್ಕೂಟದ ಹಾಲು ಉತ್ಪಾದಕರ ಸಂಘದ ವತಿಯಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ 14 ಮಹಿಳಾ ಫಲಾನುಭವಿಗಳಿಗೆ ಹಸು ಖರೀದಿಗಾಗಿ ತಲಾ ₹50 ಸಾವಿರದಂತೆ ಒಟ್ಟು ₹7 ಲಕ್ಷದ ಚೆಕ್‌ಗಳನ್ನು ಬಸವರಾಜ ರಾಯರೆಡ್ಡಿ ವಿತರಿಸಿದರು.

ಹೈನುಗಾರಿಕೆಗೆ ಉತ್ತೇಜನ ನೀಡುವ ಹಾಗೂ ಮಹಿಳೆಯರಿಗೆ ಆದಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ನೆರವು ನೀಡಲಾಗಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಕುಕನೂರು ತಹಶೀಲ್ದಾರ್ ಬಸವರಾಜ ಬಣ್ಣೆಶಿರೂರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೆಟ್ಟದೇಶ್ ಮಾಳೆಕೊಪ್ಪ, ರಾಬಕೋ ಹಾಲು ಒಕ್ಕೂಟದ ಸದಸ್ಯೆ ಕಮಲಮ್ಮ ಗಾವರಾಳ್, ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!