You are currently viewing BIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ!

BIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ!

BIG NEWS : ಮಾಹಿತಿ ನೀಡದ ಅಧಿಕಾರಿಗಳಿಗೆ 1.50 ಲಕ್ಷ ದಂಡ ವಿಧಿಸಿದ ಮಾಹಿತಿ ಆಯೋಗ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕಲಬುರಗಿ, ಮೇ 09 : ಮಾಹಿತಿ ಹಕ್ಕು ಕಾಯ್ದೆಯಡಿ ಸಕಾಲಕ್ಕೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ ಹಾಗೂ ವಿಚಾರಣೆಗೆ ಗೈರು ಹಾಜರಾಗಿ ಆಯೋಗದ ನೋಟಿಸ್‌ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೇರಿದಂತೆ 18 ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠ ದಂಡ ವಿಧಿಸಿ ಆದೇಶ ಹೊರಡಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿದ್ದಲ್ಲದೆ ಮಾಹಿತಿ ನೀಡದ ಕಾರಣ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ದಂಡ ವಿಧಿಸಲಾಗಿದೆ. ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿಗೆ ₹10 ಸಾವಿರ, ಗಂಗಾವತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವಣ್ಣ ಕಟ್ಟಿಗೆ ₹15 ಸಾವಿರ, ರಾಯಚೂರು ತಾಲೂಕು ಗ್ರೇಡ್-2 ತಹಶೀಲ್ದಾರ್ ಪರಶುರಾಮ್ ಅವರಿಗೆ ₹5 ಸಾವಿರ ದಂಡ ವಿಧಿಸಲಾಗಿದೆ.

ಇದೇ ರೀತಿ ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಲ್ಲಿಕಾರ್ಜುನ, ಸುರುಪುರ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ರಾಜಕುಮಾರ ಸುಬೆದಾರ, ಮಟ್ಟಿ ತಾಲೂಕಿನ ಆರೋಲಿ ಗ್ರಾಪಂ ಪಿಡಿಒ ರಘುನಾಥ, ಆಳಂದ ತಾಲೂಕಿನ ಯಲಸಂಗಿ ಗ್ರಾಪಂ ಪಿಡಿಒ ಜಗದೀಶ, ಸುರಪುರ ತಾಲೂಕಿನ ನಗನೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಡಿವಾಳಪ್ಪ, ಶಹಾಪುರ ತಾಲೂಕಿನ ಗೋಗಿ-ಕೆ ಗ್ರಾಮ ಪಂಚಾಯತ್ ಪಿಡಿಒ ಸಿದ್ರಾಮ, ಸಂಡೂರು ತಾಲೂಕಿನ ಹೊಸದರೋಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಲ್ಲಪ್ಪ, ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮ ಪಂಚಾಯತ್ ಪಿಡಿಒ ಮುದುಕಪ್ಪ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಯಂಕನಗೌಡ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜ್ಯೋತಿ ರೆಡ್ಡರ್, ಕಲ್ಬುರ್ಗಿ ತಾಲೂಕಿನ ಹಾಗಾರಗ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೇದಾಂಗ, ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭೀಮಣ್ಣ ಹಾಗೂ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗಾಲಿಬಸಾಬ್ ಸೇರಿದಂತೆ ಒಟ್ಟು 18 ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಒಟ್ಟು ₹1.50 ಲಕ್ಷ ದಂಡ ವಿಧಿಸಲಾಗಿದ್ದು, ಏಪ್ರಿಲ್ ತಿಂಗಳಲ್ಲಿ 564 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ 229 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ತಾವು ಅಧಿಕಾರ ಸ್ವೀಕರಿಸಿದ ಬಳಿಕ ಇದುವರೆಗೆ 3,084 ಪ್ರಕರಣಗಳನ್ನು ಕೈಗೆತ್ತಿಕೊಂಡು 88 ದಿನಗಳ ವಿಚಾರಣೆಯಲ್ಲಿ 1,308 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಬಿ. ವೆಂಕಟಸಿಂಗ್ ತಿಳಿಸಿದ್ದಾರೆ.

ಪ್ರಕರಣಗಳ ತ್ವರಿತ ವಿಲೇವಾರಿಗೆ ಅನುಕೂಲವಾಗಲು ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಬಳ್ಳಾರಿ, ಬೀದರ್, ಕಲ್ಬುರ್ಗಿ ಹಾಗೂ ಕೊಪ್ಪಳದಲ್ಲಿ ಈಗಾಗಲೇ ನಡೆಸಲಾಗಿದೆ. ಇದೇ ತಿಂಗಳ 30ರಂದು ವಿಜಯನಗರ ಜಿಲ್ಲೆಯಲ್ಲಿ ಮತ್ತೊಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

error: Content is protected !!