ಬೈಸಿಕಲ್‌ನಿಂದ ಶಾರೀರಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ: ಡಾ.ನಂದಕುಮಾರ

ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಕೊಪ್ಪಳ, ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ, ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮ (ಎನ್.ಪಿ.ಎನ್.ಸಿ.ಡಿ) ದಡಿಯಲ್ಲಿ ಜೂನ್ 03ರಂದು “ವಿಶ್ವ ಬೈಸಿಕಲ್ ದಿನಾಚರಣೆ” ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ ಅವರು ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಮಾತನಾಡಿ, ಆರೋಗ್ಯಕ್ಕಾಗಿ ಸೈಕಲ್ ಅತ್ಯವಶ್ಯಕವಾಗಿದೆ. ಈ ವರ್ಷ ವರ್ಷ “ಆರೋಗ್ಯಕ್ಕಾಗಿ ಸೈಕಲ್” ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಇಂದಿನ ದಿನಮಾನದಲ್ಲಿ ದೇಶದಲ್ಲಿ ಶೇಕಡ 41% ಜನರು ದೈಹಿಕ ಚಟುವಟಿಕೆಯ ನ್ಯೂನತೆಯಿಂದ ಅಸಾಂಕ್ರಾಮಿಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಎಲ್ಲರೂ ಬೈಸಿಕಲ್‌ನಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ ಅವರು ಮಾತನಾಡಿ, ಪ್ರತೀ ವಾರದಲ್ಲಿ 150 ನಿಮಿಷಗಳಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗುವುದರ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಎಲ್ಲರೂ ಬೈಸಿಕಲ್ ದಿನನಿತ್ಯ ತುಳಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

Leave a Reply

error: Content is protected !!