LOCAL NEWS : ಕುಕನೂರು|ಸಂತ ಸದ್ಗುರು ಸೇವಾಲಾಲ್ ರ ವಿಚಾರಧಾರೆ ಅಳವಡಿಸಿಕೊಳ್ಳಿ : ಮುಖಂಡ ಮೇಘರಾಜ್ ಬಳಗೇರಿ ಕರೆ!
ಪ್ರಜಾವಿಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಫೆ. 28 : ತಾಲ್ಲೂಕಿನ ಕಕ್ಕಿಹಳ್ಳಿ ತಾಂಡಾದಲ್ಲಿ ಸಂತ ಸೇವಾಲಾಲ್ ಮಹಾರಾಜ ಅವರ 286ನೇ ಜಯಂತಿಯನ್ನು ಅದ್ದೂರಿಯಾಗಿ ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲ್ ಅವರ ಭಾವಚಿತ್ರವನ್ನು ಅಲಂಕರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.
ಗುದ್ನೇಪ್ಪಮಠದ ಸಮೀಪದ ಸೇವಾಲಾಲ್ ವೃತ್ತದಿಂದ ಕಕ್ಕಿಹಳ್ಳಿ ತಾಂಡಾದ ಸೇವಾಲಾಲ್ ದೇವಸ್ಥಾನದವರೆಗೆ ಸಾಂಪ್ರದಾಯಿಕ ‘ಟೀಜ್’ ನೃತ್ಯದ ಮಧ್ಯೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ವಸ್ತ್ರಧಾರಣೆಯಲ್ಲಿ ಪಾಲ್ಗೊಂಡು ನೃತ್ಯ ಮಾಡಿ ಸಂಭ್ರಮಿಸಿದರು. ಮಹಿಳೆಯರು ಹೊತ್ತು ಸಾಗಿದ ಟೀಜ್ ಮೇರವಣಿಗೆ ವಿಶೇಷ ಮೆರಗು ನೀಡಿತು.
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡ ಮೇಘರಾಜ್ ಬಳಗೇರಿ ಅವರು ಮಾತನಾಡಿ,’ ವೈವಿಧ್ಯದಲ್ಲಿ ಏಕತೆ ಸಾರಿದ ಮಹನೀಯರಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಹೇಳಿದರು.
ಬಂಜಾರ ಸಮುದಾಯದಲ್ಲಿ ಹುಟ್ಟಿ ಸಂತರಾಗಿ ತಮ್ಮ ಸಮುದಾಯದ ಪ್ರಗತಿಗೆ ಶ್ರಮಿಸಿದ ಅವರು ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಭಿತ್ತಿ ಹಾಕಿದ ಮಹಾನ್ ಸಂತರು ಎಂದು ತಿಳಿಸಿದರು.
ಸತ್ಯ, ಅಹಿಂಸೆ, ದಯೆ, ಶಿಕ್ಷಣ ಮತ್ತು ವ್ಯಸನಮುಕ್ತ ಜೀವನದ ತತ್ವಗಳನ್ನು ಸಾರಿದ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯ, ಯುವ ಮುಖಂಡ ಯಮನೂರಪ್ಪ ಕಟ್ಟಿಮನಿ, ಮಾಜಿ ಗ್ರಾ ಪಂ ಅಧ್ಯಕ್ಷರು ವಿರೂಪಾಕ್ಷಯ್ಯ ಕುರ್ತಕೋಟಿ, ಬಸವಂತಪ್ಪ ನಾಯಕ, ಹಂಪಣ್ಣ ಕಟ್ಟಿಮನಿ, ಯಲ್ಲಪ್ಪ ಕಾರಭಾರಿ, ಕುಮಾರ್ ಬಳಗೇರಿ, ಯಮನೂರಪ್ಪ ಭಾನಾಪುರ, ಶರಣಪ್ಪ ಚಿಕೇನಕೊಪ್ಪ, ಕಿರಣ್ ರಾಠೋಡ್, ತಿರುಪತಿ ತಲ್ಲೂರು, ಶಶಿಕುಮಾರ್, ತಿಪ್ಪಮ್ಮ ನಾಯಕ, ಹೊನ್ನಮ್ಮ ಇಟಗಿ, ಧಾನವ್ವ ಹೊನ್ನಂಚಿ, ಸೇರಿದಂತೆ ಸಮಾಜದ ಮಹಿಳೆಯರು ಹಾಗೂ ಬಂಧು–ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸಿದರು.