ಕೊಪ್ಪಳ, ಆಗಸ್ಟ್ 15 : 77ನೇ ಸ್ವಾತಂತ್ರ‍್ಯೋತ್ಸವ ದಿನವನ್ನು ಜಿಲ್ಲಾಡಳಿತ ಭವನದಲ್ಲಿ ಆಗಸ್ಟ್ 15ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮಹಾತ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪರಸ್ಪರ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ವಿನಮಯಮಾಡಿಕೊಂಡರು.
ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ‘ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಈ ಚಳುವಳಿಯಲ್ಲಿ ಭಾಗಿಯಾದ ಮಹನೀಯರ ಪ್ರಾಣ ತ್ಯಾಗ ಬಲಿದಾನ ನೆನಪಿಸಿಕೊಳ್ಳುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ದೇಶಾದ್ಯಂತ ಈ ದಿನವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಹೋರಾಟಗಾರರ ತ್ಯಾಗ ಬಲಿದಾನದ ಜೀವನವು ನಮ್ಮ ವಿದ್ಯಾರ್ಥಿ ಯುವಸಮುದಾಯಕ್ಕೆ ಸದಾಕಾಲ ಸ್ಪೂರ್ತಿದಾಯಕವಾಗಿದೆ ಎಂದರು.
ನಮ್ಮ ದೇಶವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಉಪ್ಪಿನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹದಂತಹ ಚಳುವಳಿಗಳು ಸಾಲುಸಾಲಾಗಿ ನಡೆದವು. ಮಹಾತ್ಮ ಗಾಂಧೀಜಿಯಂತಹ ಅನೇಕ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ನಂತರ ದೇಶದೆಲ್ಲೆಡೆ ಹೋರಾಟಗಳು ಮತ್ತಷ್ಟು ತೀವ್ರಗೊಂಡವು. ಗಾಂಧೀಜಿಯವರು, ಜವಾಹರಲಾಲ್ ನೆಹರೂ, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಶುಭಾಷಚಂದ್ರ ಬೋಸ್, ಡಾ.ಬಿ.ಆರ್. ಅಂಬೇಡ್ಕರ್, ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತಹ ಅನೇಕ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ದೇಶದೆಲ್ಲೆಡೆ ಹೋರಾಟದ ಕಿಡಿ ಹೊತ್ತಿ ಕೊಪ್ಪಳ ಜಿಲ್ಲೆಯಲ್ಲಿ ಸಹ ಅನೇಕ ಹೋರಾಟಗಾರರು ಈ ಚಳುವಳಿಯಲ್ಲಿ ಧುಮುಕಿದರು. ಇದರ ಫಲವಾಗಿ 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆಯಿತು. ಈ ಸ್ವಾತಂತ್ರ್ಯ ದಿನವನ್ನು ರಾಷ್ಟ್ರದ ರಾಜಧಾನಿ ಹೊಸದಿಲ್ಲಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ, ಶಿಸ್ತುಬದ್ಧ ಫರೇಡ್ ನಮ್ಮ ದೇಶದ ಅಭಿವೃದ್ಧಿ, ಸಂಸ್ಕೃತಿಗಳನ್ನು ಬಿಂಬಿಸುತ್ತವೆ ಎಂದರು.
ಕೊಪ್ಪಳ ಜಿಲ್ಲೆಯು ರಚನೆಯಾಗಿ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಿ ಕೊಪ್ಪಳ ಜಿಲ್ಲೆಯ ಇತಿಹಾಸ ಮತ್ತು ಕೊಪ್ಪಳ ಜಿಲ್ಲಾ ರಚನಾ ಹೋರಾಟಗಾಥೆಯನ್ನು ಸ್ಮರಿಸಿದ್ದೇವೆ. ಹೊಸ ಜಿಲ್ಲೆಯಾಗಿ ಉದಯವಾದ ಬಳಿಕ ಕೊಪ್ಪಳ ಜಿಲ್ಲೆಯು ಬಹಳಷ್ಟು ಅಭಿವೃದ್ಧಿ ಕಂಡಿದೆ. ರಸ್ತೆ, ಮೂಲಭೂತ ಸೌಕರ್ಯ, ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಮೇಲ್ಸೆತುವೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಅಭಿವೃದ್ಧಿಯ ದಿಶೆಯಲ್ಲಿ ಸಾಗುತ್ತಿರುವ ಕರ್ನಾಟಕವು ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಒಂದಾಗಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ಮುಂಚೂಣಿಯಲ್ಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶೇ.80 ರಿಂದ ಶೇ.90ರಷ್ಟು ಪ್ರಗತಿ ನಮ್ಮ ಜಿಲ್ಲೆಯದ್ದಾಗಿದೆ. ಸರ್ಕಾರದ ಯಾವುದೇ ಯೋಜನೆಗಳ ಲಾಭವು ಸಾರ್ವಜನಿಕರಿಗೆ ಪೂರ್ಣಪ್ರಮಾಣದಲ್ಲಿ ತಲುಪಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ, ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಪ್ರಕರಣಗಳಿಗೆ ಪರಿಹಾರ ನೀಡುವಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅಭಿನಂದನಾರ್ಹ ರೀತಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಕಾರ್ಯಾಂಗದ ಪಾತ್ರ ಕೂಡ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸರ್ಕಾರಿ ಕೆಲಸವನ್ನು ಶ್ರದ್ಧೆ ಮತ್ತು ನಿಸ್ವಾರ್ಥದಿಂದ ಮಾಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮವಾಗಿ ಸೇವೆ ಲಭ್ಯವಾಗಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶ ರುದ್ರೇಶಪ್ಪ ಟಿ.ಎಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.