ಬೆಂಗಳೂರು : ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುಂದಿನ ಸೆಪ್ಟೆಂಬರ್ ತಿಂಗಳ 1 ರಿಂದ ಜಾರಿಗೆ ಬರುವಂತೆ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ಮಾಸಿಕ ವೇತನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ. ಮೇಲ್ವಿಚಾರಕರ ಕೆಲಸದ ಅವಧಿಯನ್ನು 6 ರಿಂದ 8 ಗಂಟೆಯವರೆಗೆ ವಿಸ್ತರಿಸಿದೆ.
ಈ ಹಿಂದೆ ಜುಲೈನಲ್ಲಿ ಗ್ರಾಮ ಪಂಚಾಯತಿ ಮೇಲ್ವಿಚಾರಕರ ಸಂಘದ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿಯಾಗಿ ವೇತನ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಈಗ ಭರವಸೆಯಂತೆ ಗ್ರಂಥಾಲಯಗಳನ್ನು ಅರಿವಿನ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿ ಗ್ರಂಥಪಾಲಕರ ವೇತನವನ್ನು 15,196 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಮೊದಲು ಗ್ರಂಥಪಾಲಕರ ವೇತನ 12 ಸಾವಿರ ಇದ್ದು, ಆರು ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಇದೀಗ ವೇತನ ಹೆಚ್ಚಿಸಿದ್ದು, ಕೆಲಸದ ಅವಧಿ ದಿನದಲ್ಲಿ 8 ಗಂಟೆಗಳ ವಿಸ್ತರಣೆ ಮಾಡಲಾಗಿದೆ.