ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ UG CET-2024ಕ್ಕೆ ನೋಂದಣಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು, ಮುಂದಿನ ತಿಂಗಳು ಏಪ್ರಿಲ್ 18 ಮತ್ತು 19ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾಹಿತಿ ನೀಡಿದ್ದು, ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್.ಸಿ (ಆನರ್ಸ್) ಕೃಷಿ, ಬಿ.ಎಸ್.ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದ, [ಬಿ.ಎಸ್.ಸಿ (ನರ್ಸಿಂಗ್) ಬಿ.ಫಾರ್ಮ್, 2ನೇ ವರ್ಷದ ಬಿ-ಫಾರ್ಮ ಮತ್ತು ಫಾರ್ಮಾಡಿ ಮುಂತಾದ ಕೋರ್ಸುಗಳಿಗೆ ದಿನಾಂಕ ಏಪ್ರಿಲ್ 18 ರಿಂದ19 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಲವು ಅಭ್ಯರ್ಥಿಗಳು ಹಾಗೂ ಪೋಷಕರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಿ, ಪ್ರಾಧಿಕಾರವು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವನ್ನು ನೀಡಿದೆ ಎಂದು ಮಾಹಿತಿ ಇದೆ.
ಇಲ್ಲಿಯವರೆಗೆ ಅರ್ಜಿ ಸಲ್ಲಿಸದಿರುವ ಅಥವಾ ಅರ್ಜಿ ಪೂರ್ಣಗೊಳಿಸದೇ ಇರುವ ಅಥವಾ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ದಿನಾಂಕ ಇದೇ 12ರ ಬೆಳಿಗ್ಗೆ 11.00 ರಿಂದ 15ರ ರಾತ್ರಿ 11.59 ರವರೆಗೆ ನೊಂದಣಿ ಮಾಡಿ ಅರ್ಜಿ ಸಲ್ಲಿಸಲು ಹಾಗೂ 16ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ ಎಂದು ತಿಳಿಸಿದೆ.
ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಸಂದರ್ಭದಲ್ಲಿ ಮತ್ತೆ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂಬುದಾಗಿ ಖಡಕ್ ಆಗಿ ಸೂಚನೆ ನೀಡಿದೆ.