BREAKING : ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ..!!
ಬೆಂಗಳೂರು : ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು.
ಈ ಕುರಿತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಸಲ್ಲಿಸಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ. ಹೈ ಕೋರ್ಟ್ ಆದೇಶವನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ನನಗೆ ಪೂರ್ಣ ಜಡ್ಜ್ಮೆಂಟ್ ಓದಲು ಇನ್ನು ಆಗಿಲ್ಲ. ಬಿಎನ್ಎಸ್ 218 ರ ಪ್ರಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲ. ಹೈಕೋರ್ಟ್ ಇದನ್ನು ಸಂಪೂರ್ಣ ತಿರಸ್ಕಾರ ಮಾಡಿದೆ. 17ಎ ಪ್ರಕಾರ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಅನುಮತಿ ನೀಡಿಲ್ಲ. ಪ್ರಾಥಮಿಕ ತನಿಖೆಗೆ ಮಾತ್ರ ಹೈಕೋರ್ಟ್ ಅನುಮತಿ ನೀಡಿದೆ’ ಎಂದು ವಿವರಣೆ ನೀಡಿದರು.
‘ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಒಳಸಂಚಿಗೆ ನಾನು ಹೆದರುವುದಿಲ್ಲ. ರಾಜಭವನ ದುರ್ಬಳಕೆಗೆ ನಾವು ಹೆದರಲ್ಲ. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲೆ ಇದೆ. ಬಿಜೆಪಿ-ಜೆಡಿಎಸ್ ನ ಒಳಸಂಚು ನಡೆದಿದ್ದು, ಕರ್ನಾಟಕದ ಜನ ನಮ್ಮ ಪಕ್ಷ ಹಾಗೂ ನನ್ನ ಪರವಾಗಿ ನಮ್ಮ ಎಲ್ಲಾ ಸಚಿವರು, ಡಿಸಿಎಂ, ಶಾಸಕರು ನನ್ನ ಪರವಾಗಿ ಇದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ನನ್ನ ಪರವಾಗಿ ಇದ್ದು, ಕಾನೂನು ಹೋರಾಟದ ಕುರಿತು ಸಲಹೆ ನೀಡಿದ್ದಾರೆ’ ಎಂದು ಸಿಎಂ ಮಾಧ್ಯಮದವರಿಗೆ ತಿಳಿಸಿದರು.