ಬೆಂಗಳೂರು : ಸ್ಯಾಂಡಲ್ ವುಡ್ ನ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರಾಜಕೀಯ ರಣರಂಗಕ್ಕೆ ಪ್ರವೇಶ ಪಡೆದಿದ್ದಾರೆ. ನಟ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಮಹೂರ್ತ ನಿಗದಿಯಾಗಿದ್ದು, ಇದೇ ಏಪ್ರಿಲ್ 14 ರಿಂದ ಪ್ರಚಾರ ಆರಂಭಿಸಲಿದ್ದಾರೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಲ ಬಿಜೆಪಿ ನಾಯಕರ ಪರ ಸುದೀಪ್ ಪ್ರಚಾರ ನಡೆಸಲಿದ್ದು, ಮೊದಲು ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬ ಭಾರಿ ಕುತೂಹಲ ಮೂಡಿದೆ.
ಇತ್ತೀಚೆಗಷ್ಟೇ ನಟ ಸುದೀಪ್ ‘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ’ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು. ಸಿಎಂ ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ, ಚಿತ್ರರಂಗದ ಕಷ್ಟದ ದಿನಗಳಲ್ಲಿರುವಾಗ ಹಲವರು ಬೆಂಬಲ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಸಿಎಂ ಬೊಮ್ಮಾಯಿಯುವರು ಬಹಳ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ಆ ವ್ಯಕ್ತಿಗೆ ಬೆಂಬಲ ನೀಡುತ್ತೇನೆ, ನಾನು ನನ್ನ ಮಾಮನಿಗೆ ಸಪೋರ್ಟ್ ಮಾಡುತ್ತೇನೆ, ಈ ವ್ಯಕ್ತಿ ನನಗೆ ಬಹಳ ಬೇಕಾಗಿರುವುದರಿಂದ ನಾನು ಈ ವ್ಯಕ್ತಿಗೆ ಬೆಂಬಲ ನೀಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ. ‘ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ನಾನು ಯಾರಿಗೂ ಟಿಕೇಟ್ ನೀಡುವಂತೆ ಮನವಿ ಮಾಡಿಕೊಂಡಿಲ್ಲ, ಆ ಮಟ್ಟಿಗೆ ನಾನು ಬೆಳೆದು ಕೂಡ ಇಲ್ಲ ಎಂದು ಸ್ಪಷ್ಟನೆ ನೀಡಿದರು.