LOCAL NEWS : ನವಲಿ ಗ್ರಾಮದ ಐತಿಹಾಸಿಕ ಶ್ರೀ ಭೋಗಾಪುರೇಶ್ವರ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದ ಲಕ್ಷಾಂತರ ಜನ..!
ಕನಕಗಿರಿ : ವಿಜಯನಗರ ಸಾಮ್ರಾಜ್ಯದ ಹಿನ್ನಲೆಯುಳ್ಳ ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಶ್ರೀ ಭೋಗಾಪುರೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು.
ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀಸ್ವಾಮಿಗೆ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಭಕ್ತರಿಗೆ ದೇವರ ಸನ್ನಿಧಿಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಸರ್ವಾಲಂಕೃತ ರಥವನ್ನು ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಪಾದಗಟ್ಟೆವರೆಗೆ ಎಳೆದು ಬಳಿಕ ಮೂಲ ಸ್ಥಾನಕ್ಕೆ ತಲುಪಿಸಿದರು.
ನೆರದಿದ್ದ ಭಕ್ತಾದಿಗಳು ತೇರಿನ ಕಲಶಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಈ ವೇಳೆಯಲ್ಲಿ ನಾಡ ಕಚೇರಿ ಕಾರ್ಯಾಲಯದ ಉಪ ತಹಸೀಲ್ದಾರ್ ಪ್ರಕಾಶ್ ಸವಡಿ, ನವಲಿ ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ ಹಾಗೂ ಉಪಾಧ್ಯಕ್ಷ ನಾಗರಾಜ್ ತಳವಾರ್, ಪಿಡಿಒ ಈರಣ್ಣ ನಕರಲ್ಲಿ ಸರ್ವ ಗ್ರಾ. ಪಂ. ಸದಸ್ಯರು, ಗ್ರಾಮದ ಹಿರಿಯರಾದ ಭೀಮನಗೌಡ ಹಾರ್ಲಪುರ್, ಶಿವರೆಡ್ಡಿ, ಕಲ್ಲೂರು ವೀರಪ್ಪಣ್ಣ, ನಿಂಗಪ್ಪ ನಾಯ್ಕ್, ವಿರೇಶ್ ನಾಗವಂಶಿ, ಮೋತಿಲಾಲ್ ನಾಯ್ಕ್ ನೀಲಾ ನಾಯ್ಕ್, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಇದ್ದರು.