ಮುದಗಲ್ಲ ವರದಿ..
ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ಇಂದು…
ಮುದಗಲ್ಲ :-ಮುಂಗಾರಿನ ಪ್ರಥಮ ಹಬ್ಬ ಕಾರ ಹುಣ್ಣಿಮೆ ಆಚರಣೆಗೆ ಆಸಕ್ತಿ ಕುಂದಿದೆ. ಕೃಷಿಯಲ್ಲಿ ಯಂತ್ರಗಳ ಬಳಕೆಯೇ ಹೆಚ್ಚುತ್ತಿದ್ದು, ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ.
ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ದನ–ಕರುಗಳ ಪ್ರಮಾಣ ತೀರಾ ಕಡಿಮೆಯಾಗಿದೆ. ರಾಸುಗಳನ್ನು ಸಾಕುವುದೇ ಸವಾಲೆಂದು ಯುವ ರೈತರು ಭಾವಿಸಿದ್ದಾರೆ. ಎಲ್ಲೆಡೆ ಯಂತ್ರೋಪಕರಣಗಳೇ ಹೆಚ್ಚಿವೆ.
‘ಎತ್ತು, ದನ, ಕರುಗಳು ಕಡಿಮೆಯಾಗುತ್ತಿರುವ ಕಾರಣ ರೈತರ ಹಬ್ಬಗಳಾದ ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆ, ಎಳ್ಳು ಅಮಾವಾಸ್ಯೆ ಹಬ್ಬಗಳ ಸಂಭ್ರಮವೂ ಅಷ್ಟಾಗಿ ಕಂಡುಬರುತ್ತಿಲ್ಲ. ರಾಸುಗಳಿಲ್ಲದೆ ಭೂಮಿಯ ಫಲವತ್ತತೆಗೆ ಅಗತ್ಯವಿರುವ ಕೊಟ್ಟಿಗೆ ಗೊಬ್ಬರವೇ ಇಲ್ಲದಂತಾಗಿದೆ’ ಎಂದು ರೈತ ನಿರುಪಾಧಿ ಬಂಕದಮನೆ ,ನೋವಿನಿಂದ ನುಡಿದರು..
ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಬಂದ ಕನ್ನಡದ ಮೊದಲ ಮಣ್ಣಿನ ಹಬ್ಬವಾಗಿದೆ. ರೈತರು ರಾಸುಗಳಿಗೆ ಔಷಧಿ ಗುಣಗಳುಳ್ಳ ಘೊಟ್ಟಿ ಕುಡಿಸಿ, ಬಣ್ಣ ಬಳಿದು ಅಲಂಕಾರ ಮಾಡಿ ಓಡಿಸಿ ಖುಷಿ ಪಡುವ ಹಬ್ಬವಾಗಿದೆ.
ರೈತನೊಂದಿಗೆ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಕಾರ ಹುಣ್ಣಿಮೆ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಪ್ರತಿಯೊಂದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎತ್ತುಗಳನ್ನು ಅಲಂಕಾರ ಮಾಡಿ ಖುಷಿಪಡುವ ರೈತರಿಗೆ ಹುಣ್ಣಿಮೆಯಲ್ಲಿ ಪ್ರವೇಶ ಮಾಡುವ ಮೃಗಶಿರ ಮಳೆ ರೈತರ ಹೊಲಗಳನ್ನು ಉತ್ತು-ಬಿತ್ತು ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ.
ಮೂರು ದಿನಗಳ ಹಬ್ಬ:
ಹುಣ್ಣಿಮೆಯ ಹಿಂದಿನ ದಿನ ‘ಹೊನ್ನುಗ್ಗಿ’ ಹಬ್ಬ ಆಚರಿಸಲಾಗುತ್ತದೆ. ಅಂದಿನ ದಿನ ರೈತರ ಮನೆಯಲ್ಲಿನ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು. ಒಟ್ಟಾರೆಯಾಗಿ ಇದು ಹಬ್ಬದ ತಯಾರಿಯ ದಿನ. ಈ ದಿನ ಎತ್ತುಗಳಿಗೆ ಹೊಸ ಹಗ್ಗ, ಕೊಳಕಣ್ಣಿ (ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣ (ಎತ್ತುಗಳ ಹತೋಟಿಗೆ ಮೂಗಿನ ಮೂಲಕ ಹಾಕುವ ಹಗ್ಗ), ಬಾಸಿಂಗ, ಗಾಜುಮಕಡಿ (ಹಣೆಗೆ ಕಟ್ಟುವ ಹೂವಿನ ಇಲ್ಲವೇ ಬಣ್ಣದ ಹಾಳೆಯ ಮಾಲೆ), ಕೋಡಿಗೆ ಕಟ್ಟಲು ಬಣ್ಣದ ಬಟ್ಟೆ ಇಲ್ಲವೇ ರಿಬ್ಬನ್ ಕಟ್ಟಿ, ಎತ್ತಿನ ಮೈಮೇಲೆ ವಿಧ ವಿಧದ ಬಣ್ಣ ಬಳಿದು ತಯಾರಿ ಮಾಡಿಕೊಳ್ಳುತ್ತಾರೆ.
ಪೌರಾಣಿಕ ಕತೆಯೂ ಇದೆ:
ಹಿಂದೆ ಸಮುದ್ರ ಮಂಥನದ ಸಮಯದಲ್ಲಿ ಸುರ ಅಸುರರು ಅಮೃತಕ್ಕಾಗಿ ಶ್ರಮಿಸುವ ಸಂದರ್ಭದಲ್ಲಿ ರಾಕ್ಷಸಿಯೊಬ್ಬಳೂ ಇಡೀ ವಿಶ್ವಕ್ಕೆ ಕಾಟ ಕೊಡುತ್ತಿದ್ದಳಂತೆ. ಆಗ ಜಗದೀಶ್ವರನು ತನ್ನ ಮಗ ನಂದಿಗೆ ಅವಳನ್ನು ಸಂಹರಿಸುವಂತೆ ಆಜ್ಞೆಯನ್ನು ಮಾಡಿದನಂತೆ. ಆಗ ನಂದಿಯು ತನ್ನ ಕೊಂಬಿನಿಂದ ಚುಚ್ಚಿ ಆಕೆಯ ಕರಳನ್ನು ತನ್ನ ಕೊಂಬಿಗೆ ಹಾಕಿಕೊಂಡು ರಕ್ಕಸಳನ್ನು ಸಂಹರಿಸಿ ಜನರಿಗೆ ನೆಮ್ಮದಿ ನೀಡಿದನಂತೆ. ನಂದಿಯ ಆ ವಿಜಯದ ಸಂಕೇತವಾಗಿ ನಂದಿಗಳನ್ನು ಸಿಂಗರಿಸಿ ಪೂಜಿಸಲಾಗುತ್ತದೆ. ಅಲ್ಲದೇ ಕರಳಿನ ಸಂಕೇತವಾಗಿ ಎತ್ತುಗಳ ಕೊಂಬಿಗೆ ಕೊಡುಬಳಿ ಮಾಡಿ ಹಾಕುವ ಪ್ರತೀತಿ ಇದೆ.
ವಿಶೇಷ ಪೂಜೆ:
ಜೇಷ್ಠಮಾಸದ ಹುಣ್ಣಿಮೆಯ ಅನುರಾಧ ನಕ್ಷತ್ರದ ದಿನ ಈ ಹಬ್ಬಕ್ಕಾಗಿ ಎತ್ತುಗಳನ್ನು ಮೈತೊಳೆದು, ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ರೈತರು ಮನೆಯ ದೇವರ ಕೋಣೆಯಲ್ಲಿ ರತ್ನ ಗಂಬಳಿಯ ಗದ್ದುಗೆ ಮೇಲೆ ಅಕ್ಕಿ ಅಥವಾ ಜೋಳದ ಸಾಸಿವೆಗಳ ಹಿಡಿಯಷ್ಟು ಗುಂಪು ಹಾಕಿದ ಮೇಲೆ ಅದರಲ್ಲಿ ಪೂರ್ವಾಭಿಮುಖವಾಗಿ ಜೋಡಿ ಎತ್ತುಗಳನ್ನು ನಿಲ್ಲಿಸುತ್ತಾರೆ. ಹೀಗೆ ನಿಲ್ಲಿಸಿದ ಎತ್ತುಗಳಿಗೆ ಮುತ್ತೈದೆಯರು ಪೂಜೆ ಸಲ್ಲಿಸಿ, ಹಬ್ಬಕ್ಕಾಗಿಯೇ ಹೋಳಿಗೆ, ಜೋಳದ ಕಿಚಡಿ, ಮಜ್ಜಿಗೆ ಸೇರಿದಂತೆ ಇತ್ಯಾದಿ ವಿಶೇಷ ಖಾದ್ಯಗಳನ್ನು ಎಡೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಎತ್ತುಗಳ ಮಾಲೀಕರು ಮುತ್ತೈದೆಯರಿಗೆ ಉಡಿ ತುಂಬಿ ಕೃತಜ್ಞತೆ ಸಲ್ಲಿಸುತ್ತಾರೆ. ಈ ಸಂಪ್ರದಾಯವನ್ನು ಉತ್ತರ ಕರ್ನಾಟಕದಲ್ಲಿ ಇಂದಿಗೂ ಕಾಣಬಹುದು. ಅದರಲ್ಲೂ ಶಿರಹಟ್ಟಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಚರಿಸುವುದು ವಿಶೇಷವಾಗಿದೆ.
ವರದಿ:- ಮಂಜುನಾಥ ಕುಂಬಾರ