SPECIAL STORY : ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 13,500 ಮಕ್ಕಳ ಅಪಹರಣ : ಹೆಚ್ಚಿನವರು ಹೆಣ್ಣು ಮಕ್ಕಳು..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ 2020ರಿಂದ ಜು.2025ರ ಒಟ್ಟು ಐದು ಅವಧಿಯಲ್ಲಿ 13,552 ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 9,789 ಹೆಣ್ಣು ಮಕ್ಕಳಿದ್ದು, ಪಾಲಕರ-ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಗೃಹ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಅಪಹರಣಗಳ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2025ರ ಮೊದಲ 7 ತಿಂಗಳಲ್ಲಿ ಈಗಾಗಲೇ 1,318 ಪ್ರಕರಣಗಳು ದಾಖಲಾಗಿದ್ದು, ಈ ವರ್ಷ ಬೆಂಗಳೂರಿನಲ್ಲಿ ಮಾತ್ರ 589 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಹೊರತುಪಡಿಸಿ ತುಮಕೂರು, ಮಂಡ್ಯ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿಯೂ ಅಪಹರಣ ಪ್ರಕರಣಗಳು ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ ಎನ್ನಬಹುದು.
ರಾಜ್ಯದಲ್ಲಿ ಮಕ್ಕಳ ನಾಪತ್ತೆಯ ಹಿಂದಿನ ಕಾರಣಗಳು ಕೇವಲ ಅಪಹರಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತಜ್ಞರು ಅಭಿಪ್ರಾಯವಾಗಿದೆ. ಮಕ್ಕಳ ಮನೋವೈದ್ಯರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಪ್ರಕಾರ, ಕೆಲವು ಮಕ್ಕಳು ಸ್ವಯಂಪ್ರೇರಣೆಯಿಂದ ಮನೆ ಬಿಟ್ಟು ಹೋಗುವುದು ಕೂಡ ಸಾಮಾನ್ಯವಾಗಿದೆ. ಪೋಷಕರ ಅತಿಯಾದ ನಿರೀಕ್ಷೆಗಳನ್ನು ಪೂರೈಸಲಾಗದೆ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮನೆಯಲ್ಲಿನ ಕಲಹಗಳು, ಪ್ರೀತಿ ಮತ್ತು ವಾತ್ಸಲ್ಯದ ಕೊರತೆ ಮಕ್ಕಳು ಮನೆ ಬಿಡಲು ಪ್ರೇರೇಪಿಸುತ್ತವೆ. ಕೆಲವು ಪ್ರಕರಣಗಳಲ್ಲಿ ಮಕ್ಕಳನ್ನು ಭಿಕ್ಷಾಟನೆ, ಬಲವಂತದ ದುಡಿಮೆ, ಅಥವಾ ಮಾರಾಟಕ್ಕಾಗಿ ಅಪಹರಿಸಲಾಗುತ್ತದೆ ಎಂದು ಆತಂಕಕಾರಿ ವಿಷಯ ತಿಳಿದು ಬಂದಿದೆ.
ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಶೇಷ ಬಾಲಾಪರಾಧಿ ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಇದ್ದರೂ ಸಹ, ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಸಮುದಾಯದ ಸಹಕಾರ ಅನಿವಾರ್ಯವಾಗಿದೆ. ಮಗು ಮನೆಗೆ ಮರಳಿದಾಗ ಪೋಷಕರು ಕೋಪಗೊಳ್ಳುವ ಬದಲು ಪ್ರೀತಿ ಮತ್ತು ಸಹನೆಯಿಂದ ವರ್ತಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಕ್ಕಳು ಕಾಣೆಯಾದ ನಂತರದ 10 ಗಂಟೆ ನಿರ್ಣಾಯಕ..!
ಮಗು ನಾಪತ್ತೆಯಾದ ಬಳಿಕ ಮೊದಲ 10 ಗಂಟೆಗಳು ಅತ್ಯಂತ ನಿರ್ಣಾಯಕವಾಗಿವೆ. ಈ ಅವಧಿಯಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಮಗುವಿನ ಸ್ನೇಹಿತರನ್ನು ಸಂಪರ್ಕಿಸಬೇಕು. ಪೋಷಕರು ತಮ್ಮ ಮಗುವಿನ ಗುರುತಿನ ಬಗ್ಗೆ ಮಾಹಿತಿಯನ್ನು ಮತ್ತು ಇತ್ತೀಚಿನ ಫೋಟೋವನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಮಗು ಮನೆಗೆ ಮರಳಿದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.