ಕೊಪ್ಪಳ | ಮೂಢನಂಬಿಕೆ ಹೋಗಲಾಡಿಸಲು ಶಾಲಾ ಮಕ್ಕಳಿಂದ ವಿಜ್ಞಾನಕ್ಕಾಗಿ ಭಾರತ ನಡಿಗೆ ! ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್ :
ಕೊಪ್ಪಳ : ಜಿಲ್ಲೆಯ ಕುಕನೂರ ತಾಲ್ಲೂಕಿನ ಬಿನ್ನಾಳ ಗ್ರಾಮದಲ್ಲಿ ವೈಚಾರಿಕ ಹಿನ್ನೆಲೆ ಅಡಗಿರುವ ‘ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ವೇದಿಕೆ, ಬ್ರೇಕ್ ಥ್ರೋ ಸೈಸ್ಸ್ ಸೊಸೈಟಿ ವತಿಯಿಂದ ‘ವಿಜ್ಞಾನಕ್ಕಾಗಿ ಭಾರತದ ನಡಿಗೆ, ಎಂಬ ಕಾರ್ಯಕ್ರಮ ಬುಧುವಾರ ನಡೆಯಿತು.
ಗ್ರಾಮದ ಪತ್ರಕರ್ತ ಜಗದೀಶ್ ಚಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಮೂಢನಂಬಿಕೆ ಬದಿಗಿಟ್ಟು ಇಂತಹ ವೈಚಾರಿಕ ಕಾರ್ಯಕ್ರಮಕ್ಕೆ ಎಲ್ಲರೂ ಬೆಂಬಲಿಸಬೇಕೆಂದರು.
ಈ ವಿಜ್ಞಾನ ನಡಿಗೆಯು ಬಿನ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನಿಗಳ ,ಸಾಹಿತಿಗಳ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಇರುವ ಫಲಕಗಳು, ಮಹಾನ್ ವ್ಯಕ್ತಿಗಳ ಸೂಕ್ತಿಗಳ ಫಲಕಗಳನ್ನು ಹಿಡಿದು ‘ವಿಜ್ಞಾನವೇ ಮಾತ್ರ ಜಗತ್ತನ್ನು ಬದಲಿಸಬಲ್ಲದು.!, ‘ನಮ್ಮ ನಡಿಗೆ ವಿಜ್ಞಾನದ ಕಡೆಗೆ, ‘ಕತ್ತಲೆ ವಿರುದ್ಧ ವಿಜ್ಞಾನ ದೀಪ, ‘ವಿಜ್ಞಾನ ಬೆಳೆಯಲಿ, ವಿಜ್ಞಾನವೇ ನಮ್ಮ ಪ್ರಗತಿ, ವಿಜ್ಞಾನ ಓದಿ, ದೇಶ ಬೆಳೆಸಿ, ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಬಸವೇಶ್ವರ ದೇವಸ್ಥಾನ, ಅಂಬೇಡ್ಕರ್ ಸರ್ಕಲ್, ಬಸ್ಸ್ಟ್ಯಾಂಡ್ ಮಾರ್ಗವಾಗಿ ಪ್ರೌಢಶಾಲಾ ಆವರಣದವರೆಗೂ ನಡಿಗೆಯ ಮೆರವಣಿಗೆ ನಡೆಯಿತು. ಬಳಿಕ ಗ್ರಾಮದ ಪ್ರೌಢಶಾಲೆಯಲ್ಲಿ ವೇದಿಕೆಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಇಳಕಲ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಅಜೀಮ್ ಜಮಾದಾರ್ ಅವರು ಮಾತನಾಡಿ, ‘ ಮಾರ್ಚ್ ಫಾರ್ ಸೈನ್ಸ್ ವೇದಿಕೆಯ ನೇತೃತ್ವದಲ್ಲಿ ವಿಜ್ಞಾನ ಚಳುವಳಿಯು ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ನಿರ್ಮಿಸುವ ಸಕಾಲಿಕ ಹೆಜ್ಜೆ ಇಟ್ಟಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
‘ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸುವ ಮನಸ್ಸು ಬೆಳೆಸಿಕೊಳ್ಳುವುದು ಇಂದಿನ ಬಹಳ ಅವಶ್ಯಕತೆಯಿದ್ದು, ವಿದ್ಯಾರ್ಥಿಯ ಜ್ಞಾನ,ವೈಜ್ಞಾನಿಕ ಮನೋಭಾವ ಮತ್ತು ವಿಮರ್ಶಾತ್ಮಕ ಚಿಂತನೆ, ಸರಿಯಾದ ಆಲೋಚನೆಗಳ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ಪಠ್ಯಕ್ರಮ, ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾದ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ ಎಂದರು.
‘ ಅವೈಜ್ಞಾನಿಕ ವಿಚಾರಗಳ ಪ್ರಚಾರವನ್ನು ನಿಲ್ಲಿಸಿ ಮತ್ತು ಸಂವಿಧಾನದ 51A ವಿಧಿಗೆ ಅನುಗುಣವಾಗಿ ವೈಜ್ಞಾನಿಕ ಮನೋಭಾವ ಮಾನವೀಯ ಮೌಲ್ಯಗಳು ಮತ್ತು ವಿಚಾರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವ ಪ್ರಸ್ತುತ ಅನಿವಾರ್ಯತೆಯಾಗಿದೆ ಎಂದು ಹೇಳಿದರು.
