“ಕೊಪ್ಪಳ | ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ವಿವಿಧ ಸಂಘಟನೆಗಳ ಒತ್ತಾಯ”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್ :
ಕೊಪ್ಪಳ : ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ವೆಂಕಟೇಶ್ ನಾಯಕ ಅವರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿದ್ದರು.
ಕೊಪ್ಪಳ ನಗರದಲ್ಲಿ ಅನೇಕ ಕಡೆ ರಸ್ತೆ ಸಂಚಾರ ನಿಯಮಗಳನ್ನು ಸಾರ್ವಜನಿಕರು ನಿರ್ಲಕ್ಷಿಸಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುವ್ಯವಸ್ಥಿತವಾಗಿ ಕ್ರಮಕೈಗೊಳ್ಳಬೇಕು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ನಗರದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಸಿ ದಿನದ 24 ಗಂಟೆ ಗಳ ಕಾಲ ಚಲನೆಯಲ್ಲಿರುವಂತೆ ನಿರ್ವಹಣೆ ಮಾಡಲು ಸಂಬಂಧ ಪಟ್ಟ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು ಎಂದರು.
ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲೂ ಪಾದಚಾರಿ ಮಾರ್ಗಗಳ ಜಾಗಗಳನ್ನು ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ನಡೆಸುತ್ತಿದ್ದು. ಇದರಿಂದ ಸಂಚರಿಸುವ ವಾಹನಗಳಿಗೆ ವಿಶೇಷವಾಗಿ ಪಾದಚಾರಿಗಳಿಗೆ ತುಂಬಾ ತೊಂದರೆಗಳು ಉಂಟಾಗುತ್ತಿವೆ ಎಂದು ಹೇಳಿದರು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಲ್ಐಸಿ ಕಛೇರಿ ಹತ್ತಿರ ಮತ್ತು ಎಂ.ಹೆಚ್.ಪಿ.ಎಸ್. ಶಾಲೆಗೆ ಹೋಗುವ ಮಕ್ಕಳಿಗೆ ವಾಹನ ದಟ್ಟಣೆಯಿಂದ ತೊಂದರೆಯಾಗುತ್ತಿದ್ದು. ಅಪಘಾತಗಳಾಗುವ ಸಂಭವ ಹೆಚ್ಚಿರುವುದರಿಂದ ಬೆಳಿಗ್ಗೆ 9:00 ಗಂಟೆಯಿಂದ 10 ಗಂಟೆಯವರೆಗೆ.ಸಂಜೆ 4 ರಿಂದ 5 ಗಂಟೆಯವರೆಗೆ ಮಕ್ಕಳ ಹಿತ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಬೇಕು ಎಂದರು.
