“ಕಲಬುರಗಿ | ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕೇಂದ್ರ ಕಚೇರಿ ಉದ್ಘಾಟನೆ”
“ಸದಸ್ಯತ್ವ ಪಡೆದವರಿಗೆ ₹10 ಲಕ್ಷ ವಿಮೆ ಸೌಲಭ್ಯ : ಕಕಕಾನಿಪ ಸಂಘದ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಪಗಡೆ ಹೇಳಿಕೆʼ !
ಪ್ರಜಾ ವೀಕ್ಷಣೆ ನ್ಯೂಸ್ :
ಕಲಬುರಗಿ : ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕೇಂದ್ರ ಕಚೇರಿಯನ್ನು ಭಾನುವಾರ ಕಲಬುರಗಿ ನಗರದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಅವರ ನೇತೃತ್ವದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ನಂತರ ಕಚೇರಿಯನ್ನು ಉದ್ಘಾಟಿಸಲಾಯಿತು.
ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್ ಪಗಡೆ ಅವರು, “ಈ ಸಂಘವನ್ನು ಕಟ್ಟಿರುವ ಪ್ರಮುಖ ಉದ್ದೇಶವು ಸ್ವಾಭಿಮಾನಿ ಪತ್ರಕರ್ತರಿಗೆ ಆರ್ಥಿಕವಾಗಿ ಸಬಲತೆ ನೀಡುವುದು, ನಾಡು–ನುಡಿ–ನೆಲ–ಜಲದ ರಕ್ಷಣೆಗೆ ಧ್ವನಿ ಎತ್ತುವುದು ಮತ್ತು ಸಮಗ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೈಜೋಡಿಸುವುದು. ಇದು ಕೇವಲ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗಲ್ಲ, ಇಡೀ ರಾಜ್ಯದ ಪತ್ರಕರ್ತರ ಹಿತಾಸಕ್ತಿಗಾಗಿ ಸ್ಥಾಪಿಸಲಾಗಿದೆ” ಎಂದು ಹೇಳಿದರು.
• ಸದಸ್ಯರಿಗೆ ವಿಶೇಷ ಸೌಲಭ್ಯಗಳು :
ಈ ಸಂಘದ ಸದಸ್ಯತ್ವ ಪಡೆದ ಪ್ರತಿಯೊಬ್ಬರಿಗೂ ₹10 ಲಕ್ಷ ಮೌಲ್ಯದ ಲೈಫ್ ಇನ್ಸೂರೆನ್ಸ್ ಸೌಲಭ್ಯ ನೀಡಲಾಗುವುದು. ಜೊತೆಗೆ ಸಂಘದ ಅಡಿಯಲ್ಲಿ ಪಿವರ್ ಹಾರ್ಟ್ ಆರ್ಗಾನಿಕ್ ಕಂಪನಿ ಪ್ರಾರಂಭಿಸಿದ್ದು, ಇದರಲ್ಲಿ ತಯಾರಾಗುವ ಅಡುಗೆ ಎಣ್ಣೆಯನ್ನು ರಾಜ್ಯದ ಪತ್ರಕರ್ತರಿಗೆ ಉಚಿತ ಡಿಸ್ಟ್ರಿಬ್ಯೂಟರ್ ಹಕ್ಕು ನೀಡುವ ಮೂಲಕ ಆರ್ಥಿಕವಾಗಿ ಬಲಿಷ್ಠರನ್ನಾಗಿಸಲಾಗುವುದು” ಎಂದು ಹೇಳಿದರು. ಭವಿಷ್ಯದಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಲಾಗುವದು ಎಂದರು.
• ಗ್ರಾಮೀಣ ಪತ್ರಕರ್ತರಿಗೆ ತರಬೇತಿ
ಗ್ರಾಮೀಣ ಭಾಗದ ಪತ್ರಕರ್ತರಿಗೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ಉತ್ತಮ ಪತ್ರಿಕೋದ್ಯಮ ಸೇವೆ ನೀಡಲು ಪ್ರೋತ್ಸಾಹಿಸುವುದಾಗಿ ಪಗಡೆ ಅವರು ತಿಳಿಸಿದರು. ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಅಥವಾ ಸಾರ್ವಜನಿಕರನ್ನು ಬ್ಲಾಕ್‌ಮೇಲ್ ಮಾಡುವ ಪತ್ರಕರ್ತರಿಗೆ ಈ ಸಂಘದಲ್ಲಿ ಅವಕಾಶವಿರುವುದಿಲ್ಲ. ಸಂಘದ ಗುರಿ–ಉದ್ದೇಶ ಒಪ್ಪುವ ಎಲ್ಲ ಪತ್ರಕರ್ತರು ರಾಜ್ಯದಾದ್ಯಂತ ಸದಸ್ಯತ್ವ ಪಡೆಯಬಹುದು” ಎಂದು ಕರೆ ನೀಡಿದರು.
• ಗಣ್ಯರ ಉಪಸ್ಥಿತಿ : ಶುಭಾಶಯ ಕೋರಿಕೆ
ಈ ಸಂದರ್ಭದಲ್ಲಿ ನವ ಕರ್ನಾಟಕ ನ್ಯೂಸ್ ಚಾನೆಲ್ ಸಂಪಾದಕ ರಾಜಶೇಖರ್ ಮಾತೋಳಿ, ಸ್ಟಾರ್ ಕನ್ನಡ ನ್ಯೂಸ್ ಸಂಪಾದಕ ರವಿಕುಮಾರ್ ಬಡಿಗೇರ್, ಚಿರಾಯು ಜ್ಞಾನಿ ದಿನಪತ್ರಿಕೆಯ ಸಂಪಾದಕ ಚಂದ್ರಶ್ಯಾ ಗೌಡ ಮಾಲಿಪಾಟೀಲ್, ಮಹಾಂತೇಶ್ ರೋಜೆ, ಕಲ್ಯಾಣ ಕರ್ನಾಟಕ ನ್ಯೂಸ್ ವರದಿಗಾರ ಮಂಜುನಾಥ್ ಸ್ವಾಮಿ, ಪವನ್ ಕುಲಕರ್ಣಿ, ವಿಠ್ಠಲ್ ಪೂಜಾರಿ, ಪ್ರವೀಣ್ ಕಲ್ಲೂರ್, ನವ ಕರ್ನಾಟಕ ನ್ಯೂಸ್ ಚಾನೆಲ್ ಜೇವರ್ಗಿ ವರದಿಗಾರ ರವಿಕುಮಾರ್ ತಳವಾರ್, ಅರವಿಂದ್ ಬಿರಾದಾರ್, ಸುನಿಲ್ ಕುಮಾರ್ ಸೇರಿದಂತೆ ಅನೇಕ ಪತ್ರಕರ್ತರು ಭಾಗಿಯಾಗಿ ಹೊಸ ಸಂಘಕ್ಕೆ ಶುಭಾಶಯಗಳನ್ನು ಕೋರಿ ಸಂತಸಪಟ್ಟರು.