LOCAL EXPRESS : ಕುಕನೂರು : ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವ ಚಿತ್ರಕ್ಕೆ ವಿಕೃತಿ ಮೆರೆದ ಕಿಡಗೇಡಿಗಳು!!
ಕುಕನೂರು : ಪಟ್ಟಣದಲ್ಲಿ ಸೋಮವಾರ ಮದ್ಯರಾತ್ರಿ ಬಂಜಾರರ ಧರ್ಮ ಗುರುಗಳಾದ ಸಂತ ಶ್ರೀ ಸೇವಾಲಾಲ ಮಹಾರಾಜರ ವೃತ್ತದಲ್ಲಿ ಕೆಲ ಕಿಡಗೇಡಿಗಳು ವಿಕೃತಿ ಮೆರೆದಿದ್ದಾರೆ.
ಸೋಮವಾರ ಮಧ್ಯರಾತ್ರಿಯಲ್ಲಿ ಪಟ್ಟಣದ 19ನೇ ವಾರ್ಡ್ ಗುದ್ದಪ್ಪನ ಮಠದಲ್ಲಿ ಸಂತ ಶ್ರೀ ಸೇವಾಲಾಲ್ ವೃತ್ತ ಇದ್ದು, ಇಲ್ಲಿ ಕೆಲ ಕಿಡಗೇಡಿಗಳು ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರ ವಿರುವ ಪೋಸ್ಟರ್ ಅನ್ನು ಹರಿದು ಮಹಾನ್ ಸಂತನನ್ನು ಅವಮಾನಿಸಿದ್ದಾರೆ.
ಇಂದು ಬೆಳಗ್ಗೆ ಈ ಘಟನೆ ತಿಳಿಯುತ್ತಿದ್ದಂತೆ, ಬಂಜಾರ ಸಮಾಜದ ಯುವಕರು, ಹಿರಿಯರು, ಸರಿಸುಮಾರು ನೂರಾರು ಜನ ಜಮಾಯಿಸಿದ್ದರು, ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ ಪಾಟೀಲ್ ಅವರು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ಸಮಾಜದ ಮುಖಂಡರೊಂದಿಗೆ ಮಾತನಾಡಿ, ‘ಈ ಹೇಯ ಕೃತ್ಯವನ್ನು ವಿಕೃತ ಮನಸ್ಸುಳ್ಳವರು ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ, ಈ ಕಿಡಗೇಡಿಗಳನ್ನು ಪತ್ತೆ ಹಚ್ಚಿ ತಕ್ಕ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಈ ಘಟನೆ ಖಂಡನೀಯ ಎಂದು ಬಂಜಾರ ಸಮಾಜದ ಮುಖಂಡರಿಗೆ ಸಮಜಾಯಿಸಿ ನೀಡಿದರು.
ಈ ವೇಳೆಯಲ್ಲಿ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಬಂಜಾರ ಸಮಾಜದ ಮುಖಂಡ ಸುರೇಶ್ ಬಳೂಟಗಿ,’ನಾವು ನಿನ್ನೆ ಒಳಮಿಸಲಾತಿಯ ಅನ್ಯಾಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೆವು, ಇದನ್ನು ಸಹಿಸದ ಅನ್ಯಜಾತಿಯವರು ಮಾಡಿದ್ದಾರೆ ಎಂದು ನಮಗೆ ಅನುಮಾನವಿದೆ, ಹಾಗಾಗಿ ಪೊಲೀಸ್ ಇಲಾಖೆ ಕುಲಂಕುಶವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ತಕ್ಕ ಶಿಕ್ಷೆ ನೀಡಬೇಕು. ನಮ್ಮ ಧರ್ಮಗುರುಗಳನ್ನು ಅವಮಾನಿಸಿದ ಕಿಡಿಗೇಡಿಗಳಿಗೆ ಗಂಭೀರ ಶಿಕ್ಷೆ ಆಗಬೇಕು, ಒಂದು ವೇಳೆ ಕಿಡಗೇಡಿಗಳು ಸಿಗದೇ ಇದ್ದ ಪಕ್ಷದಲ್ಲಿ ಈ ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಮೇಘರಾಜ್ ಬಳಗೇರಿ, ಹಂಪಣ್ಣ ಕಟ್ಟಿಮನಿ, ಕುಮಾರ್ ಬಳಗೇರಿ, ಜಿತು ನಾಯಕ್, ಯಮನೂರ ಭಾನಪೂರ್, ಪ್ರಕಾಶ್ ಬಳಗೇರಿ, ಮಹೇಶ್ ಕಾರಭಾರಿ, ತಿರುಪತಿ ತಲ್ಲೂರು, ಕಿರಣ್ ರಾಥೋಡ್, ನಾಗರಾಜ್ ಭಾನಾಪುರ್, ಸೋಮಪ್ಪ ಚಿಕೇನಕೊಪ್ಪ, ಅರ್ಜುನ್ ಕಾರಭಾರಿ, ದುರ್ಗೇಶ್ ಕಟ್ಟಿಮನಿ, ಹನುಮಂತಪ್ಪ ಚವ್ಹಾಣ್, ತಿರುಪತಿ ಕಟ್ಟಿಮನಿ ಇನ್ನುಳಿದಂತೆ ಬಂಜಾರ ಸಮುದಾಯದ ಪ್ರಮುಖ ಯುವಕರು ಹಾಗೂ ಕಕ್ಕಿಹಳ್ಳಿ ತಾಂಡದ ಜನರಿದ್ದರು.
‘ನಮ್ಮ ಧರ್ಮ ಗುರುಗಳಾದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರ ವೃತ್ತದಲ್ಲಿ ಪೂಜ್ಯರ ಭಾವಚಿತ್ರವಿರುವ ಪೋಸ್ಟರ್ ಅನ್ನು ಒಂದು ಮಾರಕಾಸ್ತ್ರದಿಂದ ಹರಿದು ಹಾಕಲಾಗಿದೆ. ಈ ಕೃತ್ಯ ಮಾಡಿದಂಥ ಕಿಡಿಗೇಡಿಗಳಿಗೆ ಪೊಲೀಸ್ ಲಾಟಿಯ ರುಚಿ ತೋರಿಸಬೇಕು, ಇಂತಹ ಘಟನೆಗಳು ಇನ್ಯಾವುದೇ ಸಮಾಜದ ಗುರುಗಳಿಗೆ ಅವಮಾನವಾಗುವಂತಹ ಪ್ರಸಂಗ ನಡೆಯಬಾರದು. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ತಪ್ಪಿದಸ್ಥರಾಗಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು’