SPECIAL STORY : ನಿಜಾಮರು ಆಳ್ವಿಕೆಯ ಮುಕ್ತಿ; ಕಲ್ಯಾಣ ಕರ್ನಾಟಕ ವಿಮೋಚನಾ ದಿನ.

ಭಾರತ ದೇಶವನ್ನು 1774 ರಿಂದ 1948 ರವರೆಗೆ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟಿಷರು ಆಡಳಿತ ನಡೆಸಿದವರು. ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 1948 ರ ಸೆಪ್ಟೆಂಬರ್ 17ರಂದು ವಿಮೋಚನೆಯಾಗಿದೆ. 13 ತಿಂಗಳ ಕಾಲ ನಡೆದ ಹೈದರಾಬಾದ್ ವಿಮೋಚನಾ ಚಳವಳಿ ಫಲವಾಗಿ ನಿಜಾಮನಿಂದ ವಿಮುಕ್ತಿ ಸಿಕ್ಕಿತ್ತು. ಅದಕ್ಕಾಗಿ ಪ್ರತಿವರ್ಷ ಈ ದಿನದಂದು ಕಲ್ಯಾಣ ಕರ್ನಾಟಕ(ಹೈದರಾಬಾದ್ ಕರ್ನಾಟಕ) ವಿಮೋಚನಾ ದಿನ ಆಚರಿಸಲಾಗುತ್ತಿದೆ.
ಹಾಗೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತ ದೇಶ ಸಣ್ಣ ಸಣ್ಣದಾದ ಸುಮಾರು 565 ರಾಜ್ಯಗಳು/ಸಂಸ್ಥಾನಗಳಾಗಿ ವಿವಿಧ ರಾಜ ಮಹಾರಾಜರುಗಳ ಆಳ್ವಡಿಗೆ ಒಳಪಟ್ಟಿತ್ತು. ಸ್ವಾತಂತ್ರ್ಯಾ ನಂತರದ ಭಾರತದ ಸರ್ಕಾರದ ಪ್ರಥಮ ಗೃಹ ಸಚಿವರಾದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಇಂತಹ ಸಣ್ಣ ಸಣ್ಣ ರಾಜ್ಯಗಳಿಗೆ/ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿಯೇ ಇರಬಹುದಾದ ಆಯ್ಕೆಗಳನ್ನು ಅವರಿಗೆ ಕೊಡಲಾಗಿತ್ತು.

ಈ ರೀತಿಯ ಆಯ್ಕೆಯನ್ನು ಬಹುತೇಕ ರಾಜ್ಯಗಳು/ಸಂಸ್ಥಾನಗಳು ಆರಂಭದಲ್ಲಿ ಒಪ್ಪಲು ಹಿಂದೇಟು ಹಾಕಿದರು, ಪಟೇಲರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ಮತ್ತು ಭವಿಷ್ಯದ ದೃಷ್ಟಿಯಿಂದ ಬಹುತೇಕ ಎಲ್ಲಾ ರಾಜ್ಯಗಳೂ ಭಾರತದೊಂದಿಗೆ ವಿಲೀನವಾಗಲು ಶರತ್ತುಬದ್ಧವಾಗಿ ಒಪ್ಪಿಕೊಂಡರೆ, ಮೈಸೂರು ಸಂಸ್ಥಾನದ ನಮ್ಮ ಒಡೆಯರ್ ಅವರು ಮಾತ್ರಾ ಯಾವುದೇ ಷರತ್ತುಗಳು ಇಲ್ಲದೇ ಹೃತ್ಪೂರ್ವಕವಾಗಿ ಸ್ವತಂತ್ರ್ಯ ಭಾರತಕ್ಕೆ ವಿಲೀನವಾಗಲು ಒಪ್ಪಿಕೊಂಡು ಸಹಿ ಹಾಕಿದ ಮೊತ್ತಮೊದಲನೇ ರಾಜರು ಎಂದೆನಿಸಿಕೊಂಡರೆ, ಅವರನ್ನೇ ಅನುಸರಿಸಿ, ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತ್ ಪ್ರಾಂತ್ಯದ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು ಸಹಾ ಭಾರತಕ್ಕೆ ಸೇರಿಕೊಂಡವು. ದುರಾದೃಷ್ಟವಷಾತ್ ಹೈದರಾಬಾದಿನ ನಿಜಾಮ ಮತ್ತು ಜುನಾಗಢದವರು ಪಾಕಿಸ್ತಾನದೊಂದಿಗೆ ಸೇರಲು ಇಚ್ಚಿಸಿದರೆ, ಕಾಶ್ಮೀರದ ರಾಜ ಅಲಿಪ್ತನೀತಿಯನ್ನು ತಾಳಿ ಸ್ವತಂತ್ರ್ಯವಾಗಿ ಉಳಿಯಲು ನಿರ್ಧರಿಸಿದರು. ಮುಂದೆ ನಾನಾ ರೀತಿಯ ರಾಜಕೀಯ ಕಾರಣಗಳಿಂದಾಗಿ ಕಾಶ್ಮೀರ ಮತ್ತು ಜುನಾಗಢ ಭಾರತಕ್ಕೆ ಸೇರಿಕೊಂಡರೆ, ದಕ್ಷಿಣ ಭಾಗದಲ್ಲಿದ್ದ ಹೈದರಾಬಾದಿನ ನಿಜಾಮ ಮಾತ್ರ ಪಾಕೀಸ್ಥಾನದ ಪರ ಕಠಿಣ ಒಲವು ತೋರಿದ್ದು ಪಟೇಲರಿಗೆ ತಲೆ ನೋವನ್ನು ತರಿಸಿತ್ತು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರುವಂತೆ ಅಂದಿನ ಗೃಹ ಸಚಿವ ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರು ಹೈದರಾಬಾದ್ ನಿಜಾಮನಿಗೆ ಸಾಕಷ್ಟು ಮನವಿ ಮಾಡುತ್ತಾರೆ. ಆದರೆ, ಸರ್ಕಾರದ ಮನವಿಗೆ ಹೈದರಾಬಾದ್ ನಿಜಾಮ ಬಗ್ಗುವಿದಲ್ಲ. ಬದಲಾಗಿ ಸ್ವತಂತ್ರವಾಗಿಯೇ ಇರುತ್ತೇನೆ ಅನ್ನೋ ಮೊಂಡುತನವನ್ನು ಪ್ರದರ್ಶಿಸುತ್ತಾನೆ. ಜೊತೆಗೆ ಸ್ವತಂತ್ರಕ್ಕಾಗಿ ನಡೆದ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರಿಸುತ್ತಾನೆ. ಹೋರಾಟಗಳಿಂದ ಹೈದರಾಬಾದ್ ನಿಜಾಮ ಬಗ್ಗದಿದ್ದಾಗ ದೇಶದ ಮೊದಲ ಗೃಹ ಸಚಿವ ಮತ್ತು ಉಕ್ಕಿನ ಮನುಷ್ಯ ಅಂತ ಖ್ಯಾತಿ ಪಡೆದಿದ್ದ ಸರ್ಧಾರ ವಲ್ಲಾಬಾಯ್ ಪಟೇಲ್ ಅವರು ಹೈದರಾಬಾದ್ ಸಂಸ್ಥಾನವನ್ನು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸಲು ಮುಂದಾಗುತ್ತಾರೆ.
ಸೆಪ್ಟಂಬರ್ 13 1948 ರಂದು ಆಪರೇಷನ್ ಪೋಲೋ ಎನ್ನುವ ಹೆಸರಿನಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲಿಕ್ಕೆ ಕಾರ್ಯಾಚರಣೆ ಆರಂಭವಾಗುತ್ತದೆ. ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯಿತ್ತುದೆ. ಆದರೆ, ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೆ ಪ್ರತಿರೋದವಿಲ್ಲದೆ ಹೈದರಾಬಾದ್ ನಿಜಾಮ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆಯನ್ನು ಸೂಚಿಸಿದನು. ಹೀಗಾಗಿ ಸೆಪ್ಟಂಬರ್ 17 ಇಲ್ಲಿನ ಜನ ವಿಮೋಚನಾ ದಿನಾಚಾರಣೆ ಅಂತ ಆಚರಿಸುತ್ತಾ ಬಂದಿದ್ದಾರೆ.
1998ರವರಗೆ ವಿಮೋಚಣಾ ದಿನಾಚರಣೆ ಅಷ್ಟೇನು ವಿಶೇಷತೆಯನ್ನು ಪಡೆದಿರಲಿಲ್ಲ. ಆದರೆಮ 1998 ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾಗಿ 50ನೇ ವರ್ಷದ ಸವಿನೆನಪಿಗೆ ಸೆಪ್ಟಂಬರ್ 17 ಅಂದಿನ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರು ವಿಮೋಚನಾ ದಿನಾಚಾರಣೆಯನ್ನಾಗಿ ಆಚರಿಸಿದರು. ಅಂದಿನಿಂದ ಪ್ರತಿವರ್ಷ ಸೆಪ್ಟಂಬರ್ 17 ವಿಮೋಚನಾ ದಿನಾಚಾರಣೆಯನ್ನಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಚರಿಸಲಾಗುತ್ತಿದೆ. ಇತ್ತಿಚೆಗೆ ಈ ದಿನಾಚಾರಣೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ ಬರುತ್ತಿರುವದರಿಂದ ಅದು ಹೆಚ್ಚು ಸುದ್ದಿಯಾಗುತ್ತಿದೆ.
ಪ್ರತಿವರ್ಷ ಸೆಪ್ಟಂಬರ್ 17 ರಂದು ಈ ಭಾಗದ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸುವರು. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿ ಬೆಳೆದು ಬಂದಿದೆ.
ವಿಮೋಚನಾ ದಿನ ಹೋಗಿ ಕಲ್ಯಾಣ ಕರ್ನಾಟಕ ಉತ್ಸವ
1998 ರಿಂದ 2020 ರವರಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೆಪ್ಟಂಬರ್ 17 ಅನ್ನು ವಿಮೋಚನಾ ದಿನ ಅಂತಲೆ ಆಚರಿಸಲಾಗುತ್ತಿತ್ತು. ಕಲಬುಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶ ಅಂತಲೆ ಕರೆಯಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ 2020ರಲ್ಲಿ ಹೈದರಾಬಾದ್ ಕರ್ನಾಟಕ ಅಂತ ಕರೆಯುತ್ತಿದ್ದ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಂತ ಮರುನಾಮಕರಣ ಮಾಡಿತು. ಜೊತೆಗೆ 2020 ರಿಂದ ವಿಮೋಚನಾ ದಿನ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂತ ಹೆಸರು ಬದಲಾಯಿಸಿದ್ದು, ಇದೀಗ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಶೇಷ ಲೇಖನ : ಸುನೀಲ್ ಕುಮಾರ್ ಮಠದ
ಪತ್ರಕರ್ತರು -ಮಂಡಲಗಿರಿ, ಕೊಪ್ಪಳ.