ಪ್ರಜಾ ವೀಕ್ಷಣೆ ಸುದ್ದಿಜಾಲ :
FLASH NEWS : ಕೊಪ್ಪಳದಲ್ಲಿ ಅಭಿವೃದ್ಧಿ ಕ್ರಾಂತಿ : ಒಂದೇ ದಿನ 2,000 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚಾಲನೆ!
ಕೊಪ್ಪಳ : ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ ಎನ್ನುವ ವಿರೋಧ ಪಕ್ಷಗಳ ಟೀಕೆಯಲ್ಲಿ ಹುರಳಿಲ್ಲ, ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13000 ಕೋಟಿ ಅನುದಾನ ನೀಡಿದೆ. ಇಂದು ಒಂದೇ ದಿನ 2 ಸಾವಿರ ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಸೇರಿದಂತೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ ಅಧೀನದ ನೂತನ 450 ಹಾಸಿಗೆ ಸಾಮರ್ಥ್ಯದ ಬೋಧಕ ಆಸ್ಪತ್ರೆಯ ನಾಲ್ಕನೇ ಅಂತಸ್ತಿನ ಮೇಲೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣ ಮತ್ತು 450 ಹಾಸಿಗೆಗಳ ಬೋಧಕ ಆಸ್ಪತ್ರೆಯನ್ನು ಉದ್ಘಾಟಿಸಿದರು.
ತೋಟಗಾರಿಕಾ ಇಲಾಖೆಯಿಂದ ಕನಕಗಿರಿ ತಾಲ್ಲೂಕಿನ ಶಿರವಾರ ಗ್ರಾಮದಲ್ಲಿ ಹೈಟೆಕ್ ತೋಟಗಾರಿಕೆ ತಂತ್ರಜ್ಞಾನ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಅರಣ್ಯ ಇಲಾಖೆಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪ್ರವಾಸಿ ತಾಣವಾದ ಕಬ್ಬರಗಿ ಜಲಪಾತ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರವಾಸಿ ತಾಣವಾದ ಹಿರೇಬೆಣಕಲ್ ಮೋರೇರ ಬೆಟ್ಟಗಳಲ್ಲಿ ಮೂಲಭೂತ ಸೌಕರ್ಯ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡುಗಳಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ರೂ. 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ರೈತರಿಗೆ 80 ಸಾವಿರ ಕೋಟಿ ಪರಿಹಾರ ಕೊಡ್ತಾ ಇರುವುದೂ ಸಹ ನಮ್ಮ ಸರ್ಕಾರವೇ ಎಂದು ಹೇಳಿದರು.
ನುಡಿದಂತೆ ನಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ. ವಿರೋಧ ಪಕ್ಷಗಳು ತಮ್ಮ ಅವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಇಂತವರು ನಮ್ಮನ್ನು ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ಹಣವನ್ನು ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ. ಇದರಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಜನರ ತಲಾ ಆದಾಯ ಹೆಚ್ಚಾಗಿ ರಾಜ್ಯದ ಆರ್ಥಿಕತೆ ಪ್ರಗತಿ ಕಂಡಿದೆ ಎಂದರು.
ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಕನ್ನಡಿಗರೇ ನಂಬರ್ ಒನ್. ಇದು ನಮ್ಮ ಸರ್ಕಾರದ ಆರ್ಥಿಕ ಸಾಧನೆ. ತೆರಿಗೆ ಪಾವತಿಯಲ್ಲಿ ರಾಜ್ಯ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಮ್ಮ ಯೋಜನೆಗಳು ಸರ್ವಧರ್ಮ ಹಾಗೂ ಸರ್ವಜಾತಿಗಳಿಗೂ ಸಹ ತಲುಪುತ್ತಿವೆ, ಇದು ನಮ್ಮ ಸರ್ಕಾರದ ಜಾತ್ಯತೀತ ಸಾಧನೆ ಎಂದರು.

ಕೊಪ್ಪಳ ಜಿಲ್ಲೆಯೊಂದರಲ್ಲೇ 9 ಕೋಟಿ 22 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಜಿಲ್ಲೆಗೆ 330 ಕೋಟಿ ಖರ್ಚಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 317776 ಫಲಾನುಭವಿಗಳಿಗೆ 1283 ಕೋಟಿ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 275903 ಫಲಾನುಭವಿಗಳಿಗೆ 290 ಕೋಟಿ ಕೊಟ್ಟಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 1.96 ಕೋಟಿ ಜನರಿಗೆ 320 ಕೋಟಿ ಮೊತ್ತದ 39.097 ಮೆಟ್ರಿಕ್ ಟನ್ ದವಸಧಾನ್ಯಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದ ಸಿಎಂ ಬೊಕ್ಕಸ ಖಾಲಿ ಆಗಿದ್ದರೆ ಇಷ್ಟೊಂದು ಪ್ರಮಾಣದ ಹಣವನ್ನು ಜನರಿಗೆ ಕೊಡಲಾಗುತ್ತಿತ್ತಾ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮನವಿಯಂತೆ ಮುಕ್ಕುಂಬಿ ಕೆರೆಗೆ ನೀರು ಹರಿಸಿದ್ದು ನಾವು. ಈಗ ಯಲಬುರ್ಗಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ 650 ಕೋಟಿ ಹಣ ಕೊಡುತ್ತಿದ್ದೇವೆ ಎಂದು ಭರವಸೆ ನೀಡಿದರು.
• ವಿವಿಧ ಕಾರ್ಯಕ್ರಮಗಳ ಉದ್ಘಾಟನೆ:

ಸಮಾರಂಭಕ್ಕೂ ಪೂರ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಕೊಪ್ಪಳ ನಗರದ ಗಂಗಾವತಿ ರಸ್ತೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಭೋಧಕ ಆಸ್ಪತ್ರೆಯ 450 ಹಾಸಿಗೆಯ ಸಾಮರ್ಥ್ಯದ ಬೋಧಕ ಆಸ್ಪತ್ರೆಯ ನೂತನ ಕಟ್ಟಡ ಮತ್ತು ಧರ್ಮಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು ಮತ್ತು ಕೊಪ್ಪಳ ಬಸ್ ನಿಲ್ದಾಣ ಎದುರುಗಡೆ ಭಕ್ತ ಕನಕದಾಸರ ಪುತ್ಥಳಿ ಅನಾವರಣಗೊಳಿಸಿದರು.
• ಕಾಮಗಾರಿಗಳ ವಿವರ :
ಸಮಾರಂಭದ ಆವರಣದಲ್ಲಿ ಸಾಲಾಗಿ ಇಡಲಾಗಿದ್ದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ವಿವರದ ಪರದೆಯನ್ನು ಬಟನ್ ಒತ್ತಿ ಸರಿಸುವ ಮೂಲಕ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 34 ವಸತಿ ನಿಲಯಗಳ ಹಾಗೂ 2025-20ನೇ ಸಾಲಿನ ಕಲ್ಯಾಣ ಕರ್ನಾಟಕ ಭಾಗದ 41 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ವಸತಿ ನಿಲಯಗಳ ಶಂಕುಸ್ಥಾಪನೆ ನೆರವೇರಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 215ರಲ್ಲಿ ಘೋಷಿಸಿದಂತೆ ಜಿಟಿಟಿಸಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಬಹು ಕೌಶಲ್ಯಾಭಿವೃದ್ಧಿ ಕೇಂದ್ರದಿAದ (ಎಂ.ಎಸ್.ಡಿ.ಸಿ) ವರ್ಷವಾರು ಅಂದಾಜು 2000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.
ಕಂದಾಯ ಇಲಾಖೆಯಿಂದ ಕುಕನೂರು, ಯಲಬುರ್ಗಾ, ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕುಗಳ ಪ್ರಜಾಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ನಗರಾಭಿವೃದ್ಧಿ ಇಲಾಖೆಯಿಂದ ಅಮೃತ್ 2.0 ಯೋಜನೆಯಡಿಯಲ್ಲಿ ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು, ಕನಕಗಿರಿ ಕಾರಟಗಿ ಮತ್ತು ಯಲಬುರ್ಗಾ ಪಟ್ಟಣಗಳಿಗೆ ಹಾಗೂ ಮಾರ್ಗ ಮಧ್ಯದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ತಳಕಲ್, ತಳಬಾಳ, ಭಾನಾಪುರ ಗ್ರಾಮಗಳಿಗೆ ಮತ್ತು ಟಾಯ್ ಕ್ಲಸ್ಟರ್ ಇಂಡಸ್ಟ್ರೀಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಕೊಪ್ಪಳ ನಗರದಲ್ಲಿ ಭಕ್ತ ಕನಕದಾಸ ಪುತ್ಥಳಿ ಅನಾವರಣ ಹಾಗೂ ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸಿದರು.
ಜಲ ಸಂಪನ್ಮೂಲ ಇಲಾಖೆಯಿಂದ ಗಂಗಾವತಿ ತಾಲ್ಲೂಕಿನಲ್ಲಿರುವ ಇಂದರಗಿ ಹಾಗೂ ಇತರೆ 27 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಮತ್ತು ಮುಕ್ಕುಂಪಿ ಹಾಗೂ ಇತರೆ 5 ಕೆರೆಗಳಿಗೆ ಅಚ್ಚುಕಟ್ಟು ಭಾಗದಲ್ಲಿ ನೀರಾವರಿ ವಂಚಿತ 15,605 ಎಕರೆ ಪ್ರದೇಶಕ್ಕೆ ನೀರೊದಗಿಸುವ ಏತ ನೀರಾವರಿ ಯೋಜನೆ ಉದ್ಘಾಟನೆ ನೆರವೇರಿಸಿದರು.
ಕೊಪ್ಪಳ, ಕುಷ್ಟಗಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಕೊಪ್ಪಳ, ಕುಷ್ಟಗಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗೆ ಚಾಲನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯಿಂದ ಗಂಗಾವತಿ ತಾಲೂಕು ಸ.ಪ.ಪೂ. ಕಾಲೇಜಿಗೆ ಕೊಠಡಿಗಳ ನಿರ್ಮಾಣ ಹಾಗೂ ಕುಷ್ಟಗಿ ತಾಲೂಕಿನ ಬಾಲಕಿಯರ ಸರಕಾರಿ ಪ್ರೌಢ ಶಾಲೆಗೆ ಭೋಜನಾಲಯ ಹಾಗೂ ಅಡುಗೆ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಾರಿಗೆ ಇಲಾಖೆಯಿಂದ ಕಾರಟಗಿ ಹೊಸ ಬಸ್ ಡಿಪೋ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯಿಂದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹಳೆಯ ಕಟ್ಟಡ ತೆರವುಗೊಳಿಸಿ ಕಲ್ಲಿನಿಂದ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಆರೋಗ್ಯ ಇಲಾಖೆಯಿಂದ ಕುಷ್ಟಗಿ ತಾಲೂಕಿನ ಎಂಸಿಹೆಚ್ ಆಸ್ಪತ್ರೆ (100 ಹಾಸಿಗೆ), ಡಿ.ಹೆಚ್.ಓ ಕಛೇರಿ, ಜಿಲ್ಲಾ ಆಯುಷ್ ಕಛೇರಿ ಕಟ್ಟಡ ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಸತಿ ಗೃಹಗಳ ಕಟ್ಟಡ ಹಾಗೂ ಆರೋಗ್ಯ ಕ್ಷೇಮ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.
ಇಂಧನ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಮುನ್ನೂರು ಗ್ರಾಮದಲ್ಲಿ 110 ಎಂವಿಎ, 110/11 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಕೃಷಿ ಇಲಾಖೆಯಿಂದ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ರೈತರ ವಸತಿ ನಿಲಯಕ್ಕೆ ಉದ್ಘಾಟನೆ ನೆರವೇರಿಸಿದರು.
