ಪ್ರಜಾ ವೀಕ್ಷಣೆ ಸುದ್ದಿ :
KOPPAL NEWS : ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ದತಿಗೆ ಹೆಚ್ಚು ಉತ್ತೇಜನ ನೀಡಬೇಕಿದೆ : ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

ಕೊಪ್ಪಳ : ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ದತಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿದ್ದು, ಕೃಷಿ ಮತ್ತು ಪಶು ಸಖಿಯರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಇಂದು ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆಹಾರ ದಿನಾಚರಣೆ-2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಯ ಸ್ಥಾಪನೆ ದಿನವನ್ನು ವಿಶ್ವ ಆಹಾರ ದಿನಾಚರಣೆಯನ್ನಾಗಿ ಇಂದು ಆಚರಿಸಲಾಗುತ್ತಿದೆ. ಎಲ್ಲಾ ಜನರಿಗೂ ಸಹ ಒಳ್ಳೆಯ ಆಹಾರ ಸಿಗಬೇಕು ಎಂಬ ಉದ್ದೇಶದಿಂದ `ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದಾಗ ಭಾರತದ ಜನಸಂಖ್ಯೆ ಸುಮಾರು 34 ರಿಂದ 35 ಕೋಟಿ ಇದ್ದು, ಪ್ರಸ್ತುತ 146 ಕೋಟಿಗೆ ತಲುಪಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆಯನ್ನು ಒದಗಿಸುವ ಸಲುವಾಗಿ 2013ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ರವರ ನೇತೃತ್ವದ ಭಾರತ ಸರ್ಕಾರವು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿತು. ಇದರಿಂದ ಅಂತ್ಯೋದಯ ಅನ್ನ ಯೋಜನೆಯಡಿ 35 ಕೆ.ಜಿ ಅಕ್ಕಿ ಮತ್ತು ಇತರೆ ಧಾನ್ಯಗಳು, ಬಡ ಕುಟುಂಬಗಳಿಗೆ 5 ಕೆ.ಜಿ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ನೀಡುವಂತಹ ಕಾರ್ಯಕ್ರಮ ಪ್ರಾರಂಭವಾಯಿತು ಎಂದರು.
ಪ್ರಸ್ತುತ ಜನರು ಫಾಸ್ಟ್ಫುಡ್ ಸೇವನೆ ಹೆಚ್ಚಾಗಿ ಮಾಡುತ್ತಿದ್ದಾರೆ. ಮಕ್ಕಳು ಸಹ ಚಾಕಲೇಟ್, ಬಿಸ್ಕೇಟ್, ಚಿಪ್ಸ್, ಕುರಕುರೆಯನ್ನು ತಿಂದರೆ, ನಗರ ಪ್ರದೇಶಗಳ ಹೆಚ್ಚು ಜನರು ದಿನನಿತ್ಯ ಮ್ಯಾಗಿ, ಬರ್ಗರ್, ಪಿಜ್ಜಾದಂತಹ ಫಾಸ್ಟ್ಫುಡ್ ಬಳಕೆ ಮಾಡುತ್ತಾರೆ. ನಿರಂತರ ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಲ್ಲರೂ ಪೌಷ್ಟಿಕ ಆಹಾರಗಳ ಬಳಕೆಗೆ ಆದ್ಯತೆ ನೀಡಬೇಕು. ಉತ್ತಮ ಆಹಾರ ಎಂದರೆ, ಸಮತೋಲಿತ ಆಹಾರವಾಗಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲಿ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭೀಣಿ ಮತ್ತು ಬಾಣಂತಿಯರಿಗೆ, ಶಾಲಾ ಮಕ್ಕಳಿಗೂ ಸಹ ಪೌಷ್ಟಿಕ ಆಹಾರದ ಜೊತೆಗೆ ಹಾಲು, ಬಾಳೆಹಣ್ಣು ಮತ್ತು ಮೊಟ್ಟೆಯನ್ನು ನೀಡಲಾಗುತ್ತದೆ ಎಂದರು.