LOCAL EXPRESS : ಗುದ್ನೇಶ್ವರ ದೇವಸ್ಥಾನ ಜಮೀನು ವಿಚಾರ : ‘ದೇವಸ್ಥಾನದ ಜಮೀನು ಖಾಸಗಿ ವ್ಯಕ್ತಿಗಳಿಗೆ ಸಿಗಲ್ಲ’ : ಶಾಸಕ ಬಸವರಾಜ ರಾಯರೆಡ್ಡಿ
ಕುಕನೂರು : ಪಟ್ಟಣದ ರುದ್ರಮುನೇಶ್ವರ (ಗುದ್ನೇಶ್ವರ) ಮಠದ ಜಮೀನು ವಿಚಾರವು ಹೈಕೋರ್ಟ್ ನಲ್ಲಿ ಇದ್ದರೂ ಸಹ, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕೆಲವು ದಿನಗಳ ಹಿಂದೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಬೆಂಬಲಿಗರು ಪರ-ವಿರೋಧದ ಪ್ರತಿಭಟನೆಗಳನ್ನು ಸಹ ಮಾಡಿದ್ದರು.
ಈ ಕುರಿತು ಇಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಗುದ್ದಪ್ಪನ ಮಠದ ಜಮೀನು ಈಗಾಗಲೇ ಮುಜರಾಯಿ ಇಲಾಖೆಗೆ ಸೇರಿದ್ದು, ಸೇವಾದಾರರು ಹಾಗೂ ಅರ್ಚಕರಿಗೆ, ಖಾಸಗಿ ವ್ಯಕ್ತಿಗಳಿಗೆ ಕೊಡುವುದಕ್ಕೆ ಬರುವುದಿಲ್ಲ, ಸರ್ಕಾರಕ್ಕೆ ಸಂಬಂಧಿಸಿದ ಜಮೀನು ವಿಚಾರ, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಅಲ್ಲಿಯೂ ಕೂಡ ನ್ಯಾಯದ ಪರ ವಾದ ಆಗಿದ್ದು, ಸರ್ಕಾರಿ ಭೂಮಿ ಎಂದೇ ಆದೇಶ ಬರುವ ವಿಶ್ವಾಸವಿದೆ’ ಎಂದರು.
‘ಈ ಜಮೀನು ವಿಚಾರದಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯೂ ಇಲ್ಲ, ಎಲ್ಲಾ ಸಾರ್ವಜನಿಕವಾಗಿ ಬೇಡಿಕೆ ಇರುವಂತ ತಾಲೂಕಿನ ಆಡಳಿತಾತ್ಮಕ ಹಿತದೃಷ್ಟಿಯಿಂದ ತಾಲೂಕ ಆಡಳಿತ ಕಚೇರಿಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಸರ್ಕಾರಕ್ಕೆ ಈ ಜಮೀನು ಗುರುತಿಸಿ, ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಹೈ ಕೋರ್ಟ್ ಒಂದೇ ಫೈನಲ್ ಅಲ್ಲ, ನನಗೂ ಸುಪ್ರೀಂ ಕೋರ್ಟ್ ಗೊತ್ತಿದೆ, ಸಾರ್ವಜನಿಕರ ಹಿತಾಸಕ್ತಿಗಾಗಿ ನಾನು ಸುಪ್ರೀಂ ಕೋರ್ಟ್ ವರೆಗೂ ಹೋಗುತ್ತೇನೆ’ ಎಂದು ವಿರೋಧಿ ಪಾಳಯಕ್ಕೆ ಖಡಕ್ ಎಚ್ಚರಿಕೆ ನೀಡಿದರು.
‘ಕಾನೂನು ಅರ್ಥಮಾಡಿಕೊಳ್ಳಿ, ನಾನು ಶಾಸಕನಾಗಿದ್ದು ಎಲ್ಲರ ಹಿತವನ್ನು ಕಾಪಾಡುವುದಕ್ಕೆ ಅಷ್ಟೇ, ನನಗೆ ಎಲ್ಲರೂ ಸಮಾನರು, ತಾಲೂಕಿನ ಅಭಿವೃದ್ಧಿಗೆ ಸಹಕರಿಸಿ, ದೇವಸ್ಥಾನದ ಜಮೀನನ್ನು ವೈಯಕ್ತಿಕವಾಗಿ ಖಾಸಗಿ ವ್ಯಕ್ತಿಗಳಿಗೆ ಕೊಡಲು ಬರುವುದಿಲ್ಲ, ಅದು ನಿಮಗೂ ಸಿಗುವುದಿಲ್ಲ, ಯಾರ್ಯಾರ್ದು ಮಾತುಗಳನ್ನು ಕೇಳಿ, ನನ್ನ ವಿರುದ್ಧ ಷಡ್ಯಂತರ ಮಾಡಿದರೆ, ನನಗೇನು ನಷ್ಟವಿಲ್ಲ, ಆ ಜಮೀನಿನಲ್ಲಿ ಕಟ್ಟಡಗಳು ಬೇಡ ಎಂದರೆ ಖಾಸಗಿ ಭೂಮಿಯನ್ನು ನಿಮ್ಮ ಮುಂದಾಳತ್ವದಲ್ಲಿ ಸರ್ಕಾರಕ್ಕೆ ಖರೀದಿ ಮಾಡಿಕೊಡಿ’ ಎಂದು ಸಲಹೆ ನೀಡಿದರು.