LOCAL NEWS : ಬಂಜಾರ ಸಮುದಾಯದ ಏಳಿಗೆಗೆ ಯುವಶಕ್ತಿಯೇ ದಿಕ್ಸೂಚಿ : ಮುಖಂಡ ಸುರೇಶ ಬಳೊಟಗಿ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮಾರ್ಚ್ 23 : ಸಮುದಾಯದ ಹಿರಿಯರ ಕನಸು ನನಸಾಗಲು ಯುವಜನತೆ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುವುದು ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಗೋರ್ ಸೇನಾ ಪ್ರಧಾನ ಕಾರ್ಯದರ್ಶಿ ಸುರೇಶ ಬಳೊಟಗಿ ಅಭಿಪ್ರಾಯ ಪಟ್ಟರು.
ಇಂದು ತಾಲೂಕಿನ ಹೊನ್ನುಣಸಿ ತಾಂಡಾದಲ್ಲಿ ನಡೆದ ಸದ್ಗುರುಶ್ರೀ ಸೇವಾಲಾಲ ಮಹಾರಾಜರ ಭೋಗ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ‘ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಯಿಂದ ಯುವಶಕ್ತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. “ಯುವಕರು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿದಾಗ ಮಾತ್ರ ನಮ್ಮ ಹಿರಿಯರು ಕಂಡ ಸಮೃದ್ಧ ಸಮಾಜದ ಕನಸು ನನಸಾಗಲು ಸಾಧ್ಯ” ಎಂದು ಸಮುದಾಯದ ಯುವಕರಲ್ಲಿ ಕರೆ ನೀಡಿದರು.
’ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಯುವಕರು ಆಧುನಿಕ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು. ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. “ಸಂವಿಧಾನ ನೀಡಿರುವ ಸಮಾನ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆಡಳಿತಾತ್ಮಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ನಮ್ಮ ಸಮುದಾಯದ ಯುವಕರು ಕುಳಿತಾಗ ಮಾತ್ರ ತಾಂಡಾಗಳ ನೈಜ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಗೋರ ಸಿಕವಾಡಿ ಫುಲ್ ಟೈಮರ್ (ಪೂರ್ಣಾವಧಿ ಕಾರ್ಯಕರ್ತ ) ಉಮೇಶ ರಾಠೋಡ ಮಾತನಾಡಿ, ‘ಬಂಜಾರ ಸಮುದಾಯವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಲಂಬಾಣಿ ಭಾಷೆ ಮತ್ತು ಉಡುಗೆ-ತೊಡುಗೆಗಳಿಗೆ ಹೆಸರುವಾಸಿಯಾಗಿದೆ. ಈ ಅಸ್ಮಿತೆಯನ್ನು ಉಳಿಸಿಕೊಂಡೇ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಹಿರಿಯರು ಹಾಕಿಕೊಟ್ಟ ಸಂಸ್ಕಾರದ ಹಾದಿಯಲ್ಲಿ ನಡೆದು, ಹೊಸ ಕಾಲದ ಕೌಶಲಗಳನ್ನು ಕಲಿಯುವ ಮೂಲಕ ಸಮುದಾಯದ ಗೌರವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಜೊತೆಗೆ ವರದಕ್ಷಿಣೆ ಇಂಥ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಸದೃಢ ಸಮಾಜ ಕಟ್ಟುವ ಸಂಕಲ್ಪ ಮಾಡಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಸಂಘಟನೆ ಮತ್ತು ವ್ಯಸನಮುಕ್ತ ಸಮಾಜ:-
ಯುವಕರು ದುಶ್ಚಟಗಳಿಂದ ದೂರವಿದ್ದು, ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ತಾಂಡಾಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಲು ಯುವ ಸಮಿತಿಗಳು ಶ್ರಮಿಸಬೇಕು. ಬಂಜಾರ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯುವಕರು ಸೇತುವೆಯಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗೋರ ಸೇನಾ ಮುಖಂಡರಾದ ವಿಶ್ವನಾಥ ರತನ್, ರಾಘವೇಂದ್ರ ಬಳಗೇರಿ, ತಾಂಡಾದ ನಾಯಕರಾದ ನಿಂಗಪ್ಪ ಚವ್ಹಾಣ, ಈರಣ್ಣ ಚವ್ಹಾಣ,ಯಮನೂರ ರಾಠೋಡ, ಚಂದ್ರು ಚವ್ಹಾಣ,ಹಾಗೂ ಮಹಿಳೆಯರು, ಯುವಕರು ಹಾಜರಿದ್ದರು.